ನವದೆಹಲಿ: ಹೆಂಡತಿಯರನ್ನು ಅದಲು ಬದಲು ಮಾಡಿಕೊಳ್ಳುವುದು ಭಾರತೀಯ ನೌಕಾಸೇನೆಯಲ್ಲಿ ಮಾಮೂಲಿಯಾಗಿ ಬಿಟ್ಟಿದೆ ಎಂದು ಅಧಿಕಾರಿಯೊಬ್ಬರ ಪತ್ನಿ ದೂರಿದ್ದಾರೆ. ಇದರ ವಿರುದ್ಧ ದೂರು ನೀಡಲು ಯಾವುದೇ ಮಹಿಳೆ ಮುಂದೆ ಬರುವ ಧೈರ್ಯ ತೋರುವುದಿಲ್ಲ. ಆದರೆ, ಈಗೀಗ ಹೆಣ್ಣುಮಕ್ಕಳು ಇದರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಈ ಕುರಿತು ನನಗೆ ಖುಷಿ ಇದೆ. ಇಂಥ ಶೋಷಣೆಯನ್ನು ಸಹಿಸಿಕೊಳ್ಳುವ ಬದಲು ದೂರು ನೀಡಲು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಈಕೆ ದೂರಿದ್ದಾರೆ. ಈ ಮಹಿಳೆ ಇತ್ತೀಚೆಗಷ್ಟೇ ಹೆಂಡತಿಯರ ಅದಲು ಬದಲು ವಿರುದ್ಧ ರಕ್ಷಣಾ ಸಚಿವ ಆ್ಯಂಟನಿಗೆ ದೂರು ನೀಡಿದ್ದರು. ಈಕೆಯ ಪತಿ ಕಾರವಾರ ನೌಕಾ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ಪತಿ ಪ್ರಕರಣ ಹಿಂತೆಗೆದುಕೊಳ್ಳುವಂತೆ ಆಗ್ರಹಿಸುತ್ತಲೇ ಇದ್ದಾರೆ. ಆದರೆ, ನಾನು ಯಾವುದೇ ಕಾರಣಕ್ಕೂ ದೂರು ಹಿಂತೆಗೆದುಕೊಳ್ಳುವುದಿಲ್ಲ. ಈಗ ನಡೆಯುತ್ತಿರುವ ಆಂತರಿಕ ತನಿಖೆಯಿಂದ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸ ನನಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
'ಭಾರತದ ಜತೆ ಸ್ನೇಹ ಬೇಡ'
ಇಸ್ಲಾಬಾಮಾದ್: ಕಾಶ್ಮೀರ ವಿಚಾರವನ್ನು ಬಿಟ್ಟು ಯಾವುದೇ ಸರ್ಕಾರವು ಪಾಕಿಸ್ತಾನದಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಕಾಶ್ಮೀರದ ಬೆಲೆತೆತ್ತು ಭಾರತದೊಂದಿಗೆ ಸ್ನೇಹ ಬೆಳೆಸುವ ತಪ್ಪನ್ನು ಹೊಸ ಸರ್ಕಾರ ಮಾಡಲೇಬಾರದು. ನವಾಜ್ ಷರೀಫ್ ನೇತೃತ್ವದ ಪಾಕ್ ಸರ್ಕಾರಕ್ಕೆ ಇಂತಹುದೊಂದು ಎಚ್ಚರಿಕೆ ನೀಡಿದ್ದು ಪಾಕಿಸ್ತಾನ ಮೂಲದ ಎಲ್ಲ ಕಾಶ್ಮೀರಿ ಉಗ್ರವಾದಿ ಸಂಘಟನೆಗಳ ಮುಖ್ಯಸ್ಥ ಸೈಯದ್ ಸಲಾಹುದ್ದೀನ್. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯುನೈಟೆಡ್ ಜಿಹಾದ್ ಕೌನ್ಸಿಲ್ ಮತ್ತು ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥನೂ ಆಗಿರುವ ಸಲಾಹುದ್ದೀನ್, ಕಾಶ್ಮೀರ ವಿಷಯವನ್ನು ನೆನೆಗುದಿಗೆ ಬಿಟ್ಟು, ನವದೆಹಲಿಯೊಂದಿಗೆ ವ್ಯಾಪಾರ, ಸಾಂಸ್ಕೃತಿಕ ವಿನಿಮಯ ಮತ್ತು ಪ್ರವಾಸೋದ್ಯಮ ಸಂಬಂಧಕ್ಕೆ ಪ್ರಯತ್ನಪಟ್ಟರೆ ಎಚ್ಚರ ಎಂದೂ ಹೇಳಿದ್ದಾನೆ. ಹೊಸ ಸರ್ಕಾರವು ಕಾಶ್ಮೀರಕ್ಕೆ ಸಂಬಂಧಿಸಿ ಪಾಕಿಸ್ತಾನದ ಸಾಂಪ್ರದಾಯಿಕ ನೀತಿಯನ್ನೇ ಅನುಸರಿಸಬೇಕು ಎಂದೂ ಸೂಚಿಸಿದ್ದಾನೆ.
ತಿಮ್ಮಪ್ಪನ ದರ್ಶನಕ್ಕೆ ಇನ್ನು ವಸ್ತ್ರಸಂಹಿತೆ
ಹೈದರಾಬಾದ್: ನೀವು ವಿಐಪಿ ಭಕ್ತರಾಗಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದೀರಾ? ಹಾಗಿದ್ದರೆ ನಿಮ್ಮ ಉಡುಪಿನ ಬಗ್ಗೆ ಗಮನಕೊಡಿ. ಬರ್ಮುಡಾ, ಮಿನಿಸ್ಕರ್ಟ್, ಮಿಡಿ, ಜೀನ್ಸ್, ಸ್ಲೀವ್‌ಲೆಟ್ ಬಟ್ಟೆಗಳನ್ನು ಹಾಕಿ ದರ್ಶನ ಪಡೆಯುತ್ತೀರೆಂದರೆ, ಅದು ಸಾಧ್ಯವೇ ಇಲ್ಲ. ಏಕೆಂದರೆ, ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಈಗ ವಸ್ತ್ರಸಂಹಿತೆ ಜಾರಿಯಾಗಿದೆ. ವಿಐಪಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುವಾಗ ಡ್ರೆಸ್‌ಕೋಡ್ ಅನುಸರಿಸಲೇಬೇಕು. ಮಹಿಳಾ ಭಕ್ತರಾದರೆ ಚೂಡಿದಾರ್-ಶಾಲು, ಸೀರೆ ಧರಿಸಬೇಕು, ಪುರುಷರಾದರೆ ಧೋತಿ ಅಥವಾ ಲುಂಗಿ ಮತ್ತು ಉತ್ತರೀಯ(ಶಾಲು) ಅಥವಾ ಕುರ್ತಾ ಧರಿಸಬೇಕು. ಸರಳವಾದ ಶರ್ಟ್ ಹಾಗೂ ಪ್ಯಾಂಟ್ ಧರಿಸಬಹುದು. ಇದನ್ನು ಬಿಟ್ಟು ಲೋ ವೇಯ್ಸ್ಟ್ ಜೀನ್ಸ್, ಸ್ಲೀವ್‌ಲೆಟ್ ಟಾಪ್‌ಗಳು, ಬರ್ಮುಡಾ, ಶಾರ್ಟ್ ಟಿ ಶರ್ಟ್, ಮಿನಿಸ್ಕರ್ಟ್, ಮಿಡಿ ಮುಂತಾದ ಯಾವುದೇ ಪಾಶ್ಚಿಮಾತ್ಯ ಉಡುಗೆಗಳನ್ನು ಧರಿಸಲೇಬಾರದು ಎಂದು ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಹೇಳಿದೆ.