ಸುಕ್ಮಾ: ಸುಕ್ಮಾ ಜಿಲ್ಲೆಯಲ್ಲಿ ನಡೆದಿದ್ದ ನಕ್ಸಲ್ ಕಾರ್ಯಾಚರಣೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸಿಆರ್ಪಿಎಫ್ ಯೋಧ ದೀಪಕ್ ಕುಮಾರ್ ಸಾವನ್ನಪ್ಪಿದ್ದಾರೆ.
ಕಳೆದ ಸೋಮವಾರ ಛತ್ತೀಸ್ ಗಡದ ಸುಕ್ಮಾ ಜಿಲ್ಲೆಯ ರಾಯ್ಪುರದಲ್ಲಿ ನಡೆದಿದ್ದ ಭೀಕರ ನಕ್ಸಲ್ ದಾಳಿ ವೇಳೆ 14 ಸಿಆರ್ಪಿಎಫ್ ಯೋಧರು ಸಾವನ್ನಪ್ಪಿ, 12 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಪ್ರಸ್ತುತ ಗಾಯಾಳುಗಳನ್ನು ದಾಖಲು ಮಾಡಲಾಗಿರುವ ಸೇನಾ ಆಸ್ಪತ್ರೆಯಲ್ಲಿ ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸಿಆರ್ಪಿಎಫ್ ಯೋಧ ದೀಪಕ್ ಕುಮಾರ್ ಎಂಬುವವರು ಇಂದು ಸಾವಿಗೀಡಾಗಿದ್ದಾರೆ.
ಮೃತ ದೀಪಕ್ ಕುಮಾರ್ ಮೂಲತಃ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯವರಾಗಿದ್ದು, ನಕ್ಸಲ್ ಕಾರ್ಯಾಚರಣೆ ವೇಳೆ ದೀಪಕ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ರಾಯ್ ಪುರದಲ್ಲಿ ನಡೆದಿದ್ದ ನಕ್ಸಲ್ ಕಾರ್ಯಾಚರಣೆ ವೇಳೆ ದೇಹದಲ್ಲಿ ಗುಂಡುಹೊಕ್ಕಿದ್ದರೂ ಕೂಡ ದೀಪಕ್ ಕುಮಾರ್ ಮಾತ್ರ ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸದೇ ತಮ್ಮ ಶೌರ್ಯ ಪ್ರದರ್ಶಿಸಿದ್ದರು. ಅಂತಿಮವಾಗಿ ಕಾರ್ಯಾಚರಣೆ ಮುಕ್ತಾಯದ ಬಳಿಕವೂ ಕೂಡ ಸಹಾಯಕರ ಮೊರೆ ಹೋಗದ ದೀಪಕ್ ಕುಮಾರ್, ತೀವ್ರ ರಕ್ತಸ್ರಾವದ ನಡುವೆಯೇ ಸುಮಾರು 9 ಕಿ.ಮೀ ನಡೆದಿದ್ದರು ಎಂದು ಮೂಲಗಳು ತಿಳಿಸಿವೆ.
ವೈದ್ಯಕೀಯ ಚಿಕಿತ್ಸೆ ಕೊರತೆಯಿಂದ ದೀಪಕ್ ಕುಮಾರ್ ಸಾವು..!
ಇನ್ನು ದೀಪಕ್ ಕುಮಾರ್ ಸಾವಿನ ಕುರಿತಂತೆ ಹಲವು ಊಹಾಪೋಹಗಳು ಏಳುತ್ತಿದ್ದು, ಯೋಧ ದೀಪಕ್ ಕುಮಾರ್ ಸಾವಿಗೆ ವೈದ್ಯಕೀಯ ಚಿಕಿತ್ಸೆಯ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಕಾರ್ಯಾಚರಣೆಯಲ್ಲಿ ಗುಂಡೇಟಿನಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಯೋಧ ದೀಪಕ್ ಕುಮಾರ್ ಆಸ್ಪತ್ರೆಗೆ ನಡೆದುಕೊಂಡೇ ಸಾಗಿದ್ದರು. ಈ ವೇಳೆ ದೀಪಕ್ ದೇಹದಿಂದ ಸಾಕಷ್ಟು ರಕ್ತಸ್ರಾವವಾಗಿದ್ದು, ನಿರಂತರ 7 ಗಂಟೆಗಳ ಸತತ ನಡಿಗೆಯಿಂದಾಗಿ ಮತ್ತು ತೀವ್ರ ರಕ್ತಸ್ರಾವದಿಂದ ದೀಪಕ್ ನಿತ್ರಾಣರಾಗಿದ್ದರು.
ಆದರೆ ಸುಕ್ಮಾ ಜಿಲ್ಲೆಯ ಸೇನಾ ಆಸ್ಪತ್ರೆಯಲ್ಲಿ ದೀಪಕ್ ಕುಮಾರ್ಗೆ ಅತ್ಯಗತ್ಯವಾದ ವೈದ್ಯಕೀಯ ಪರಿಕರಗಳಿರಲಿಲ್ಲ. ಹೀಗಾಗಿ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರನ್ನು ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಅಧಿಕಾರಿಗಳು ಚಿಂತಿಸುತ್ತಿದ್ದರಾದರೂ ದುರಾದೃಷ್ಟವಶಾತ್ ಅಷ್ಟರೊಳಗೇ ಯೋಧ ದೀಪಕ್ ಕುಮಾರ್ ಸಾವನ್ನಪ್ಪಿದ್ದಾರೆ. ದೀಪಕ್ ಕುಮಾರ್ ನಿಧನಕ್ಕೆ ಸಹೊದ್ಯೋಗಿ ಯೋಧರು ಕಂಬನಿ ಮಿಡಿದಿದ್ದಾರೆ.