ಪೆಶಾವರ(ಪಾಕಿಸ್ತಾನ): ಭಯೋತ್ಪಾದಕರ ವಿರುದ್ಧ ಪಾಕಿಸ್ತಾನ ಸೇನಾ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 19 ಉಗ್ರರು ಮೃತಪಟ್ಟಿದ್ದಾರೆ.
ಆಫ್ಘಾನಿಸ್ತಾನ ಗಡಿ ಭಾಗದ ತಿರಾಹ್ ಕಣಿವೆ, ಅಕ್ಕಾ ಖೇಳ್ ಹಾಗೂ ಕೊಕಿ ಖೇಳ್ ಪ್ರದೇಶಗಳಲ್ಲಿ ಬುಧವಾರ ನಡೆದ ಜೆಟ್ ದಾಳಿಯಲ್ಲಿ ಕನಿಷ್ಠ 8 ಜನರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನ ಸೇನಾ ಪಡೆಯ ವೈಮಾನಿಕ ದಾಳಿಯಲ್ಲಿ ಖೈಬರ್ 1 ಪ್ರದೇಶದಲ್ಲಿನ ಉಗ್ರರ ಐದು ಅಡಗುತಾಣಗಳು ಧ್ವಂಸಗೊಂಡಿವೆ.
‘ತಿರಹ್ ಹಾಗೂ ಖೈಬರ್ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದ ವೈಮಾನಿಕ ದಾಳಿಯಲ್ಲಿ 11 ಭಯೋತ್ಪಾದಕರು ಮೃತಪಟ್ಟಿದ್ದಾರೆ’ ಎಂದು ಸೇನೆಯು ಬುಧವಾರ ತಿಳಿಸಿದೆ.
ಉಗ್ರರ ನಿರ್ಮೂಲನಾ ಕಾರ್ಯಾಚರಣೆಯ ಭಾಗವಾಗಿ ಪಾಕಿಸ್ತಾನ ಸೇನೆಯು ಈವರೆಗೂ 1300 ಭಯೋತ್ಪಾದಕರನ್ನು ಕೊಂದಿದೆ.