ನವದೆಹಲಿ: ಭಾರತೀಯ ದಂಡ ಸಂಹಿತೆಯಲ್ಲಿ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅಪರಾಧ ಪ್ರಕರಣಗಳ ಪಟ್ಟಿಯಲ್ಲಿರುವ ಆತ್ಮಹತ್ಯೆಯನ್ನು ತೆಗೆದುಹಾಕಲು ನಿರ್ಧರಿಸಿದೆ.
ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮುಂದಾಗುವವರನ್ನು ಶಿಕ್ಷಿಸದೆ, ವೈದ್ಯಕೀಯ ನೆರವು ನೀಡಿ ಜೀವನೋಲ್ಲಾಸ ಮೂಡಿಸುವ ಉದ್ದೇಶದಿಂದ ಆತ್ಮಹತ್ಯೆ ಯತ್ನವನ್ನು ಅಪರಾಧ ಎಂಬುದನ್ನು ತೆಗೆದು ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇಂದು ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಈ ತೀರ್ಮಾನಕ್ಕೆ ದೇಶದ 18 ರಾಜ್ಯಗಳು ಹಾಗೂ 4 ಕೇಂದ್ರಾಡಳಿತಗಳು ಸಮ್ಮತಿ ನೀಡಿದ್ದು, ಇನ್ನು ಮುಂದೆ 309 ಸೆಕ್ಷನ್‌ಗೆ ಆತ್ಮಹತ್ಯೆ ಬರುವುದಿಲ್ಲ. ಆತ್ಮಹತ್ಯೆ ಪ್ರಯತ್ನ ಮಾಡಿ ಬದುಕುಳಿದ ವ್ಯಕ್ತಿಯ ವಿರುದ್ಧ ದೂರು ಸ್ವೀಕರಿಸುವಂತಿಲ್ಲ. ವಿಚಾರಣೆ ಅಥವಾ ತನಿಖೆ ನಡೆಸುವಂತಿಲ್ಲ ಎಂಬ ನಿಯಮವನ್ನು ಆತ್ಮಹತ್ಯಾ ಪ್ರಕರಣದಲ್ಲಿ ವಿಧಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309ನ್ನು ಅಪರಾಧ ಪಟ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ, ಬದುಕುಳಿದರೆ ಆತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 309ರಡಿ ಪ್ರಕರಣ ದಾಖಲಿಸಿ, ಒಂದು ವರ್ಷ ಜೈಲು ಹಾಗೂ ದಂಡ ವಿಧಿಸಲಾಗುತ್ತಿತ್ತು.