ಜಿನೇವಾ: ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ವಾಪಸ್ ತರಲು ಹೆಣಗಾಡುತ್ತಿರುವ ಭಾರತ ಸರ್ಕಾರಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದ ಮಾಹಿತಿದರ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಎಚ್‌ಎಸ್‌ಬಿಸಿ ಬ್ಯಾಂಕಿನಲ್ಲಿ ನೌಕರನಾಗಿದ್ದ ಹೆರ್ವ್ ವಿರುದ್ಧ ಸ್ವಿಜರ್ಲೆಂಡ್ ಅಧಿಕಾರಿಗಳು ದತ್ತಾಂಶ ಕಳವು ಆರೋಪ ಹೊರಿಸಿದ್ದಾರೆ.
ಬ್ಯಾಂಕಿನಲ್ಲಿ ಸಿಸ್ಟಂ ಎಂಜಿನಿಯರ್ ಆಗಿದ್ದ ವೇಳೆ ಬ್ಯಾಂಕಿನ ಗ್ರಾಹರಕರ ಹಲವಾರು ರಹಸ್ಯ ಮಾಹಿತಿಗಳನ್ನು ಹೆರ್ವ್ ಕದ್ದಿದ್ದರು. ಇದನ್ನು ದೇಶದ ಬ್ಯಾಂಕಿಂಗ್ ಕ್ಷೇತ್ರದ ಅತಿದೊಡ್ಡ ಭದ್ರತಾ ಲೋಪ ಎಂದೇ ಪರಿಗಣಿಸಲಾಗಿತ್ತು.
ಎಚ್‌ಎಸ್‌ಬಿಸಿ ಬ್ಯಾಂಕಿನ ಸ್ವಿಸ್ ಶಾಖೆಯಿಂದ 2006ರಿಂದ 2007ರ ಅವಧಿಯಲ್ಲಿ ಹೆರ್ವ್ ಸುಮಾರು 24 ಸಾವಿರ ಗ್ರಾಹಕರ ಮಾಹಿತಿಯನ್ನು ಕಳವು ಮಾಡಿದ್ದರು. ಜತೆಗೆ ಈ ಮಾಹಿತಿಯನ್ನು ಲೆಬನಾನ್ ಬ್ಯಾಂಕಿಗೆ, ಪ್ಯಾರಿಸ್ ಮೂಲಕ ನ್ಯಾಷನಲ್ ಡೈರೆಕ್ಟೂರೇಟ್ ಆಫ್ ಟ್ಯಾಕ್ಸ್ ಇನ್ವೆಸ್ಟಿಗೇಷನ್ಸ್ ಮತ್ತು ಇತರೆ ರಾಷ್ಟ್ರಗಳ ಅಧಿಕಾರಿಗಳಿಗೆ ರವಾನಿಸಲಾಗಿತ್ತು.
ಖಾತೆಗಳ ಮಾರಿತಿಯನ್ನು ಫ್ರಾನ್ಸ್‌ನ ವಿತ್ತ ಸಚಿವ ಕ್ರಿಸ್ಟಿನ್ ಲಗಾರ್ಡೆ ಅವರಿಗೂ ಕಳುಹಿಸಲಾಗಿದ್ದು, ಅವರು ಇದನ್ನು ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.
2008ರಲ್ಲಿ ಹೆರ್ವ್ ಅವರು ಸ್ವಿಜರ್ಲೆಂಡ್ ಅನ್ನು ತೊರೆದ ಬಳಿಕ ಅವರು ಭಾರಿ ಸುದ್ದಿಯಾಗಿದ್ದರು. ಕೆಲವರು ಅವರನ್ನು ಹೀರೋ ಎಂದೇ ಪರಿಗಣಿಸಿದ್ದರು. ಈಗ ಹೆರ್ವ್ ವಿರುದ್ದ ಗಂಭೀರ ಆರೋಪ ಹೊರಿಸಲಾಗಿರುವ ಕಾರಣ, ಕಳವಿಗೆ ಸಂಬಂಧಿಸಿ ಅವರು ಸ್ವಿಸ್ ಕೋರ್ಟ್‌ನಲ್ಲಿ ವಿವರಣೆ ನೀಡಲೇಬೇಕಾಗಿದೆ.