ಬೆಂಗಳೂರು: ನಗರದ ಐದು ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗದ ಒತ್ತುವರಿಯನ್ನು ಸೋಮವಾರದೊಳಗೆ ತೆರವುಗೊಳಿಸಿ, ಆ ಸಂಬಂಧ ಫೋಟೋಗಳನ್ನು ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿದೆ.
ಪಾದಚಾರಿ ಮಾರ್ಗ ಒತ್ತುವರಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲಾ ಮತ್ತು ನ್ಯಾ.ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠವೂ ನಗರದ ಸಿಎಂ ಎಚ್‌ರಸ್ತೆ, ವಿದ್ಯಾರಣ್ಯಪುರ, ಮಿಲ್ಲರ್ಸ್, ಜಯನಗರ ಮತ್ತು ವಸಂತನಗರ ರಸ್ತೆಗಳ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಬೇಕು. ಮುಂದಿನ ವಿಚಾರಣೆ ವೇಳೆ ಒತ್ತುವರಿ ತೆರವಿನ ಫೋಟೋಗಳನ್ನು ಸಲ್ಲಿಸಬೇಕು ಎಂದು ಸೂಚಿಸಿದೆ.
ಅಲ್ಲದೆ, ಟ್ರಾನ್ಸ್ ಫಾರ್ಮರ್‌ಗಳು ನಗರದ ಪಾದಚಾರಿ ಮಾರ್ಗಗಳ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ ವಿವರಣೆ ನೀಡಲು ಬೆಸ್ಕಾಂ ಪರ ವಕೀಲರು ವಿಚಾರಣೆಗೆ ಖುದ್ದು ಹಾಜರಿರಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ಅನಗತ್ಯ ಹಾರ್ನ್ ತಡೆಯಿರಿ: ಶಾಲೆ ಮತ್ತು ಆಸ್ಪತ್ರೆಯಂಥ ನಿಶ್ಯಬ್ದ ವಲಯದಲ್ಲಿ ಹಾರ್ನ್ ಮಾಡುವುದನ್ನು ತಡೆಯಬೇಕು. ಹಾರ್ನ್ ಹೊಡೆಯುವವರಿಗೆ ನೋಟಿಸ್ ಜಾರಿ ಮಾಡಿ, ದಂಡ ವಸೂಲಿ ಮಾಡಬೇಕು.
ಅಲ್ಲದೆ, ಶಬ್ದ ಮಾಲಿನ್ಯ ಉಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಂದು ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಬಿಬಿಎಂಪಿಗೆ ನಿರ್ದೇಶಿಸಿತು.
ವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ
ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ವಿಚಾರದಲ್ಲಿ ವಿಐಪಿ ಅಥವಾ ಸಾಮಾನ್ಯ ವ್ಯಕ್ತಿ ನಡುವೆ ತಾರತಮ್ಯ ನೀತಿ ಅನುಸರಿಸಬಾರದು. ಪಾದಚಾರಿ ಮಾರ್ಗದ ಮೇಲೆ ವಾಹನಗಳ ನಿಲುಗಡೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಒಂದು ವೇಳೆ ವಾಹನ ನಿಲುಗಡೆ ಮಾಡಿದರೆ ಮುಲಾಜಿಲ್ಲದೆ ದಂಡ ವಿಧಿಸಬೇಕು.
ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಕುರಿತು ನೀತಿ ರೂಪಿಸಿ ಮಾಹಿತಿ ನೀಡುವಂತೆ ಎಂದು ಬಿಬಿಎಂಪಿಗೆ ಪೀಠ ಸೂಚಿಸಿತು.
ಕಬ್ಬನ್, ರೇಸ್‌ಕೋರ್ಸ್ ಮತ್ತು ಸ್ಯಾಂಕಿ ರಸ್ತೆಗಳನ್ನು 'ಮಾದರಿ' ರಸ್ತೆಗಳನ್ನಾಗಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಪರ ವಕೀಲರು ವಿಚಾರಣೆ ವೇಳೆ ಕೋರ್ಟ್‌ಗೆ ತಿಳಿಸಿದರು. ಶೀಘ್ರ ಈ ಕಾಮಗಾರಿ ಪೂರ್ಣಗೊಳಿಸಬೇಕು. ಆ ರಸ್ತೆಗಳಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ಮಟ್ಟದ ನಿಯಂತ್ರಣ ಕಾರ್ಯ ಆರಂಭಿಸಬೇಕು ಎಂದು ಸೂಚಿಸಿದೆ ಪೀಠ 2015ರ ಜ.24ಕ್ಕೆ ವಿಚಾರಣೆ ಮುಂದೂಡಿದೆ.
ದೋಷಾರೋಪ ಪಟ್ಟಿ
ಭಾರಿ ಮಳೆಗೆ ಬಿಳೇಕಹಳ್ಳಿಯಲ್ಲಿನ ತೆರೆದ ಮೋರಿಯಲ್ಲಿ ಬಾಲಕಿ ಗೀತಾ ಲಕ್ಷ್ಮಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಕುರಿತಂತೆ ಬಿಬಿಎಂಪಿಯ ತಪ್ಪಿತಸ್ಥ ನಾಲ್ವರು ಅಧಿಕಾರಿಗಳ ವಿರುದ್ಧ ದೋಸಾರೋಪ ಪಟ್ಟಿ ತಯಾರಾಗಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ತೆರೆದ ಮೋರಿಯಲ್ಲಿ ಬಾಲಕಿ ಬಿದ್ದು ಸಾವನ್ನಪ್ಪಿದ ಘಟಿನೆಗೆ ಬಿಬಿಎಂಪಿ ಹಾಗೂ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಂಸದ ರಾಜೀವ್ ಚಂದ್ರಶೇಖರ್ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು.