ಬೆಂಗಳೂರು: ವಾಹನ ನಿಲುಗಡೆ ನಿಷೇಧಿಸಿದ ರಸ್ತೆಗಳು, ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸುವ ಚಾಲಕರೇ ಎಚ್ಚರ! ಇನ್ನು ಮುಂದೆ ಹೀಗೆ ಮಾಡಿದಲ್ಲಿ ನಿಮ್ಮ ಚಾಲನಾ ಪರವಾನಗಿ (ಡಿಎಲ್)ರದ್ದುಗೊಳ್ಳಲಿದೆ.
ಸಂಚಾರ ಹಾಗೂ ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಗುರುವಾರ ಈ ಸುತ್ತೋಲೆ ಹೊರಡಿಸಿದ್ದು, ತತ್ಕ್ಷಣದಿಂದಲೇ ಜಾರಿಗೆ ಬಂದಿದೆ.
ನೋ ಪಾರ್ಕಿಂಗ್ ಸ್ಥಳ ಹಾಗೂ ಫುಟ್ಪಾತ್ನಲ್ಲಿ ನಿಲ್ಲಿಸಿದರೆ ಈವರೆಗೆ 100 ದಂಡ ವಿಧಿಸಲಾಗುತ್ತಿತ್ತು. ಇನ್ನು ದಂಡದ ಜತೆಗೆ, ಡಿಎಲ್ ವಶಪಡಿಸಿಕೊಳ್ಳಲಾಗುವುದು.
'ವಾಹನ ಅಥವಾ ಜನರ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದಲ್ಲಿ ಅದನ್ನು ಅಧಿಕಾರಿಗಳು ಪರಿಗಣಿಸುತ್ತಾರೆ' ಎಂದು ಬಿ.ದಯಾನಂದ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ವಸತಿ ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗದಂತೆ ವಾಹನ ನಿಲ್ಲಿಸಿದರೆ ಸಮಸ್ಯೆ ಇಲ್ಲ. ಆದರೆ, ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರು ಕೊಟ್ಟರೆ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ತೆರವಿಗೆ ಆದೇಶ
ನಗರದ ಸಿಎಂ ಎಚ್ ರಸ್ತೆ, ವಿದ್ಯಾರಣ್ಯಪುರ, ಮಿಲ್ಲರ್ಸ್, ಜಯನಗರ ಮತ್ತು ವಸಂತನಗರ ರಸ್ತೆಗಳ ಪಾದಚಾರಿ ಮಾರ್ಗದ ಒತ್ತುವರಿಯನ್ನು ಸೋಮವಾರದೊಳಗೆ ತೆರವುಗೊಳಿಸಿ, ಆ ಸಂಬಂಧ ಫೋಟೋಗಳನ್ನು ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಹೈ ಕೋರ್ಟ್ ಆದೇಶ ನೀಡಿದೆ.