ದೇಶ

ಸಚಿವ ಮದನ್ ಮಿತ್ರ ಬಂಧನ: 'ರಾಜಕೀಯ ಪಿತೂರಿ' ಎಂದ ಸಿಎಂ ಮಮತಾ

Vishwanath S

ಕೊಲ್ಕಾತ್ತಾ: ಬಹುಕೋಟಿ ಶಾರದಾ ಚಿಟ್‌ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ಮುಖಂಡ ಮದನ್ ಮಿತ್ರರನ್ನು ಸಿಬಿಐ ಪೊಲೀಸರು ಬಂಧಿಸಿರುವುದರ ಹಿಂದೆ ರಾಜಕೀಯ ಪಿತೂರಿ ಅಡಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಸಚಿವ ಮದನ್ ಮಿತ್ರರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಕೊಲ್ಕಾತ್ತಾದಲ್ಲಿ ಸುದ್ಧಿಗೋಷ್ಠಿ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ ಅವರು, ರಾಜಕೀಯ ಪಿತೂರಿಯಿಂದ ಮದನ್ ಮಿತ್ರರನ್ನು ಬಂಧಿಸಲಾಗಿದೆ. ಮಿತ್ರರ ಬಂಧನ ಅಸಂವಿಧಾನಕವಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಬಿಜೆಪಿ ವಿರುದ್ಧ ಅಧಿಕಾರ ದುರಪಯೋಗ ಆರೋಪ ಮಾಡಿದ ಮಮತಾ ಬ್ಯಾನರ್ಜಿ ಅವರು, ಸಂವಿಧಾನಿಕ ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿನಾಃ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ನಾಯಕರನ್ನು ಮಾತ್ರ ಬಂಧಿಸಲಾಗುತ್ತಿದೆ. ಇದರೊಂದಿಗೆ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಗೂಂಡಾಗಿರಿ ನಡೆಸುತ್ತಿದ್ದು, ಜಾತ್ಯತೀತ ಶಕ್ತಿಗಳನ್ನು ಹತ್ತಿಕುವ ಯತ್ನ ನಡೆಸುತ್ತಿದೆ. ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಪಕ್ಷಗಳ ಮುಖಂಡರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಮದನ್ ಮಿತ್ರರಿಗೆ ನವೆಂಬರ್‌ನಲ್ಲಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಅನಾರೋಗ್ಯದ ನೆಪ ಹೇಳಿಕೊಂಡು ವಿಚಾರಣೆಗೆ ಗೈರಾಗುತ್ತಿದ್ದರು. ಹೀಗಾಗಿ ಮದನ್ ಮಿತ್ರರನ್ನು ಇಂದು ಸಂಜೆ ಕ್ರಿಮಿನಲ್ ಸಂಚು, ವಂಚನೆ ಆರೋಪದಡಿ ಮಿತ್ರರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು.

SCROLL FOR NEXT