ಇಸಿಸ್ ಟ್ವಿಟರ್ ಖಾತೆ ಹೊಂದಿದ್ದ ಶಂಕಿತ ಉಗ್ರ ಮೆಹ್ದಿ 
ದೇಶ

ಇಸಿಸ್ ಟ್ವಿಟರ್ ಖಾತೆ ಹೊಂದಿದ್ದ ಶಂಕಿತ ಉಗ್ರನ ಬಂಧನ

ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ...

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ದೇಶದ್ರೋಹಿ ಸಂದೇಶಗಳನ್ನು ಹಾಕುತ್ತಿದ್ದ ಟ್ವಿಟರ್ ಖಾತೆದಾರನನ್ನು ಶನಿವಾರ ಬಂಧಿಸಲಾಗಿದೆ.

ಉಗ್ರನ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಂಧಿಸಿದ್ದಾರೆ. ಇಸಿಸ್ ಹೆಸರಲ್ಲಿ ಪ್ರಕಟವಾಗುತ್ತಿದ್ದ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರು ಮೂಲದ ವ್ಯಕ್ತಿಯ ಕೈವಾಡವಿದೆ ಎಂದು ಬ್ರಿಟನ್ ಮೂಲದ ಚಾನೆಲ್ 4' ನ್ಯೂಸ್ ಸುದ್ದಿವಾಹಿನಿ ವರದಿ ಪ್ರಸಾರ ಮಾಡಿತ್ತು.

ಬೆಂಗಳೂರಿನಲ್ಲಿದ್ದು ಕೊಂಡೇ "ಶಮಿವಿಟ್ನೆಸ್" ಎಂಬ ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ತೆರೆದಿದ್ದ ವ್ಯಕ್ತಿಯೋರ್ವ ಟ್ವಿಟರ್ ಮೂಲಕ ದೇಶವಿದ್ರೋಹ ಸಂದೇಶಗಳನ್ನು ಹಾಗೂ ಇಸಿಸ್ ಪರವಾದ ಇಸ್ಲಾಂ ಸೈದ್ಧಾಂತಿಕ ನಿಲುವುಗಳನ್ನು ಪಸರಿಸಿ ವಿಶ್ವಾದಾದ್ಯಂತ ಇಸ್ಲಾಂ ಯುವಕರನ್ನು ತಮ್ಮ ಸಂಘಟನೆಗೆ ಸೇರುವಂತೆ ಪ್ರೇರೇಪಿಸುತ್ತಿದ್ದನು ಎಂದು ವಾಹಿನಿ ಆರೋಪಿಸಿತ್ತಲ್ಲದೆ, ವಾಹಿನಿ ಈಗಾಗಲೇ ಶಮಿ ವಿಟ್ನೆಸ್ ಖಾತೆ ನಿವಎರ್ಹಿಸುತ್ತಿದ್ದ ಮೆಹ್ದೀ ಎಂಬ ವ್ಯಕ್ತಿಯನ್ನು ಸಂದರ್ಶಿಸಿದ್ದು, ಖಾತೆಯ ನಿರ್ವಹಣೆ ಕುರಿತಂತೆ ಆತ ಕೆಲ ವಿಚಾರಗಳನ್ನು ಹೇಳಿದ್ದಾನೆ ಎಂದು ಸುದ್ದಿ ಪ್ರಸಾರದಲ್ಲಿ ಹೇಳಿಕೊಂಡಿತ್ತು.

ಪ್ರಕರಣದ ಕುರಿತಂತೆ ತನಿಖೆ ಕೈಗೊಂಡಿದ್ದ ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸುವ ಸಲುವಾಗಿ ಎನ್‌ಐಎ ಮತ್ತು ಐಬಿ ಕೇಂದ್ರ ಭದ್ರತಾ ಸಂಸ್ಥೆಗಳನ್ನು ಸಂಪರ್ಕಿಸಿತ್ತು.  ಈ ಸಂಸ್ಥೆಗಳ ಸಹಾಯದಿಂದ ಇಂದು ದೇಶವಿದ್ರೋಹಿ ಸಂದೇಶ ರವಾನಿಸುತ್ತಿದ್ದ ಮೆಹ್ದೀಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ರೆಡ್ಡಿ ಇಂದು ಅಧಿಕೃತ ಹೇಳಿಕೆ ನೀಡಿದ್ದಾರೆ.

ಮೆಹ್ದೀ ಮೂಲತಃ ಬೆಂಗಳೂರಿಗನಂತೆ. ಬೆಂಗಳೂರಿನಲ್ಲಿದ್ದುಕೊಂಡೇ ಇಸಿಸ್ ಪರವಾಗಿ ಟ್ವಿಟರ್ ಖಾತೆಯಲ್ಲಿ ಸಂದೇಶಗಳನ್ನು ಬಿತ್ತರಿಸುತ್ತಿದ್ದನು.

ಪ್ರತೀ ತಿಂಗಳು ಈತ ಸುಮಾರು 2 ಮಿಲಿಯನ್ ಪ್ರಚೋದನಕಾರಿ ಸಂದೇಶಗಳನ್ನು ಟ್ವಿಟರ್ ಖಾತೆಗೆ ಹಾಕುತ್ತಿದ್ದನು. ಇಸಿಸ್ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿರುವ ವಿಶ್ವಾದ್ಯಂತ ವಿವಿಧ ಪ್ರದೇಶಗಳಲ್ಲಿ ನೆಲೆಗೊಂಡಿರುವ ಸುಮಾರು 17, 700 ಮಂದಿ ಖಾತೆಯನ್ನು ಪ್ರತಿ ನಿತ್ಯ ವೀಕ್ಷಿಸುತ್ತಿದ್ದರು ಮತ್ತು ಆಯಾ ದೇಶಗಳ ಕುರಿತ ಸುದ್ದಿ ಸಮಾಚಾರಗಳನ್ನು ಚರ್ಚೆ ನಡೆಸುತ್ತಿದ್ದರು ಎಂದು ಚಾನೆಲ್ 4 ಸುದ್ದಿವಾಹಿನಿ ಹೇಳಿದೆ.

ಈ ಮೆಹ್ದೀ ಯಾರು?
ಇಸಿಸ್ ಉಗ್ರ ಸಂಘಟನೆಯ ಹೆಸರಲ್ಲಿ ಶಮಿವಿಟ್ನೆಸ್ ಎಂಬ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದೀ ಮೂಲತಃ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಯಂತೆ. ಸಂಸ್ಥೆಯಲ್ಲಿ ಉನ್ನತ ಹುದ್ದೆ ಹೊಂದಿದ್ದರೂ, ರಹಸ್ಯವಾಗಿ ಇಸ್ಲಾಮಿಕ್ ಸ್ಟೇಟ್ ಪರ ಕೆಲಸ ಮಾಡುತ್ತಿದ್ದಾನೆ. 2013ರಲ್ಲಿ ಶಮಿವಿಟ್ನೆಸ್ ಟ್ವಿಟರ್ ಖಾತೆಯನ್ನು ಮೆಹ್ದೀ ತೆರೆದಿದ್ದು, ಜಿಹಾದಿ ಕುರಿತ ಲೇಖನಗಳನ್ನು ಪ್ರಕಟಿಸುವ ಮೂಲಕ ಈ ಖಾತೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು.

ಅಲ್ಲದೆ ಸಿರಿಯಾದ ಬಿಲಾದ್-ಅಲ್-ಶಾಮ್, ಜಿಹಾದಿ, ಆರ್ಥಿಕ ಬಿಕ್ಕಟ್ಟು, ತಂತ್ರಜ್ಞಾನ, ಇತಿಹಾಸಗಳ ಬಗ್ಗೆ ಬರೆಯುತ್ತಿದ್ದನು. ಇದಲ್ಲದೇ ಇರಾಕ್ ಮತ್ತು ಸಿರಿಯಾದಲ್ಲಿ ಆರಂಭಗೊಂಡಿರುವ ಬಿಕ್ಕಟ್ಟಿನ ಕುರಿತಂತೆ ಲೇಖನಗಳನ್ನು ಪ್ರಕಟಿಸುತ್ತಿದ್ದನು ಮತ್ತು ಇಸಿಸ್ ಸೇರುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದನು. ಒಂದು ಮೂಲದ ಪ್ರಕಾರ ಉಗ್ರ ಸಂಘಟನೆಗೆ ಆನ್‌ಲೈನ್ ಮೂಲಕವಾಗಿ ಅತಿದೊಡ್ಡ ಪ್ರಮಾಣದಲ್ಲಿ ಈತನೇ ನೇಮಕಾತಿ ಮಾಡುತ್ತಿದ್ದನು ಎಂದು ಚಾನೆಲ್ 4 ಹೇಳಿದೆ.

ಅಲ್ಲದೆ ತನ್ನ ಕಚೇರಿಯಲ್ಲಿ ಮೆಹ್ದೀ ಎಷ್ಟೇ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದರೂ, ನಿತ್ಯ ಕನಿಷ್ಟ 3 ಬಾರಿ ಟ್ವಿಟರ್‌ನಲ್ಲಿ ಸಂದೇಶಗಳನ್ನು ಬರೆಯುತ್ತಿದ್ದನಂತೆ. ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ತನ್ನ ಮೊಬೈಲ್‌ನಲ್ಲಿಯೇ ಟ್ವಿಟರ್ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದನಂತೆ.

ಪತ್ರಕರ್ತರ ಶಿರಚ್ಛೇಧ ವಿಡಿಯೋಗಳನ್ನು ಹಾಕಿದ್ದ..

ಇರಾಕ್ ಮತ್ತು ಸಿರಿಯಾದಲ್ಲಿ ಯುದ್ಧ ಸಾರಿರುವ ಇಸಿಸ್ ಹೋರಾಟಕ್ಕೆ ಬೆಂಬಲ ಸೂಚಿಸುವಂತಹ ಮತ್ತು ಇಸಿಸ್ ಉಗ್ರರ ಗೆಲುವಿಗೆ ದೇವರಲ್ಲಿ ಪ್ರಾರ್ಥಿಸುವಂತಹ ಸಂದೇಶಗಳನ್ನು ಟ್ವಿಟರ್‌ನಲ್ಲಿ ಹಾಕುವುದಲ್ಲದೇ, ಇರಾಕ್‌ನಲ್ಲಿರುವ ಲಂಡನ್ ಮತ್ತು ಅಮೆರಿಕ ಪತ್ರಕರ್ತರ ಶಿರಚ್ಛೇಧದ ವಿಡಿಯೋವನ್ನು ಮೆಹ್ದೀ ಪದೇ ಪದೇ ಅಪ್‌ಲೋಡ್ ಮಾಡುತ್ತಿದ್ದನು.

ಖಾತೆ ಮುಟ್ಟುಗೋಲಿನ ನಂತರ ಹೊಸ ಹೆಸರಲ್ಲಿ ಖಾತೆ ತೆರೆದಿದ್ದ

ಸಮಾಜದ್ರೋಹಿ ಸಂದೇಶಗಳನ್ನು ಪ್ರಕಟಿಸುತ್ತಿದ್ದ ಹಿನ್ನಲೆಯಲ್ಲಿ ಮತ್ತು ವಿಶ್ವಸಮುದಾಯದ ವಿರೋಧದ ಹಿನ್ನಲೆಯಲ್ಲಿ 'ಶಮಿವಿಟ್ನೆಸ್‌' ಖಾತೆಯನ್ನು ಟ್ವಿಟರ್ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿತ್ತು. ಇದಾದ ಬಳಿಕ ಟ್ವಿಟರ್ ಅಧಿಕಾರಿಗಳಿಗೆ ಇಸಿಸ್ ಪ್ರಾಣಬೆದರಿಕೆಯ ಕರೆಗಳು ಬಂದಿತ್ತಾದರೂ, ಇದಾದ ಕೆಲ ಸಮಯದ ಬಳಿಕ ಇದೇ ಮೆಹ್ದೀ ಮತ್ತೊಂದು ಹೊಸ ಹೆಸರಲ್ಲಿ ಖಾತೆಯನ್ನು ಮತ್ತೆ ತೆರೆದಿದ್ದಾನಂತೆ. ಅಲ್ಲದೆ ಮತ್ತೊಂದು ಆಘಾತಕಾರಿ ಸುದ್ದಿ ಎಂದರೆ ಈ ಖಾತೆಯನ್ನು ಮೆಹ್ದೀ ಇಂದಿಗೂ ಸಕ್ರಿಯವಾಗಿ ನಿರ್ವಹಣೆ ಮಾಡುತ್ತಿದ್ದಾನಂತೆ ಎಂದು ಚಾನಲ್ 4 ನ್ಯೂಸ್ ಸಂಸ್ಥೆ ಹೇಳಿದೆ.

ಇಸಿಸ್ ಸೇರಲು ಉತ್ಸುಕನಾಗಿದ್ದ ಮೆಹ್ದೀಗೆ ಕುಟುಂಬದಿಂದ ತಡೆ..!
ಇದೇ ವೇಳೆ ಒಂದು ಸಂದರ್ಭದಲ್ಲಿ ಮೆಹ್ದೀ ಭಾರತ ದೇಶವನ್ನು ತೊರೆದು ಇಸಿಸ್ ಉಗ್ರ ಸಂಘಟನೆಯನ್ನು ಸೇರಲು ಉತ್ಸುಕನಾಗಿದ್ದನು. ಆದರೆ ಕೌಟುಂಬಿಕ ಹಿನ್ನಲೆಯಲ್ಲಿ ಆತ ಇಸಿಸ್ ಸೇರದೇ ಬೆಂಗಳೂರಿನಲ್ಲಿಯೇ ಉಳಿದಿದ್ದಾನಂತೆ. ಆರ್ಥಿಕವಾಗಿ ಹಿಂದುಳಿದಿರುವ ಆತನ ಕುಟುಂಬ ಮೆಹ್ದೀ ಮೇಲೆಯೇ ಅವಲಂಬಿತವಾಗಿದ್ದು, ಇದೇ ಕಾರಣಕ್ಕಾಗಿ ಆತ ಬೆಂಗಳೂರು ತೊರೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾನಂತೆ.

ಜೀವ ಬೆದರಿಕೆ ಇರುವುದರಿಂದ ಸಂಪೂರ್ಣ ವಿವರ ಇಲ್ಲ

ಇದೇ ವೇಳೆ ಮೆಹ್ದೀ ಜೀವಕ್ಕೆ ಅಪಾಯವಿರುವುದರಿಂದ ಆತ ತನ್ನ ಸಂಪೂರ್ಣ ವಿವರ ಬಹಿರಂಗ ಪಡಿಸಿಲ್ಲ ಎಂದು ಚಾನಲ್ 4 ವಾಹಿನಿ ಹೇಳಿಕೊಂಡಿದ್ದು, ಈ ವಿಚಾರವನ್ನು ಆತನೇ ಸುದ್ದಿಸಂಸ್ಥೆಗೆ ತಿಳಿಸಿದ್ದಾನಂತೆ. ಹೀಗಾಗಿಯೇ ಸುದ್ದಿ ವಾಹಿನಿ ಆತನ ವಿವರವನ್ನು ಸಂಪೂರ್ಣವಾಗಿ ಬಹಿರಂಗಗೊಳಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT