ನವದೆಹಲಿ: ರೂ.50 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ತಪ್ಪಿಸುವುದನ್ನು ದೃಢೀಕೃತ ಅಪರಾಧ ಎಂದು ಪರಿಗಣಿಸಬೇಕು ಎನ್ನುವ ಸಲಹೆಯನ್ನು ಎಸ್ಐಟಿ ಸರ್ಕಾರಕ್ಕೆ ನೀಡಿದೆ.
ತೆರಿಗೆಗಳ್ಳತನಕ್ಕೆ ಸಂಬಂಧಿಸಿ ರಚಿಸಲಾಗಿದ್ದ ಉನ್ನತ ಸಮಿತಿಯೇ ಈ ಶಿಫಾರಸು ಮಾಡಿತ್ತು ಎಂದು ಕಪ್ಪುಹಣ ಪ್ರಕರಣಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಉಪಾಧ್ಯಕ್ಷ ನ್ಯಾ ಅರಿಜಿತ್ ಪಸಾಯತ್ ಹೇಳಿದ್ದಾರೆ.
ದೊಡ್ಡಮೊತ್ತದ ಹಣದ ವರ್ಗಾವಣೆ ಮತ್ತು ಹಣವನ್ನು ಇಟ್ಟುಕೊಳ್ಳುವ ಕುರಿತೂ ನಿಯಂತ್ರಣ ಹೇರಬೇಕಿದೆ. ಈ ರೀತಿಯ ಕ್ರಮಗಳಿಂದ ಕಪ್ಪುಹಣಕ್ಕೆ ಕಡಿವಾಣ ಬೀಳಲಿದೆ. ಶಾಪಿಂಗ್ ಮಾಲ್ಗಳಲ್ಲೂ ರೂ.1 ರಿಂದ 2 ಲಕ್ಷ ವರೆಗಿನ ಹಣದ ವ್ಯವಹಾರ ನಡೆಯುತ್ತದೆ. ಇದರ ಮೇಲೂ ನಿಗಾ ಇಡುವಂತಾಗಬೇಕು ಎಂದಿದ್ದಾರೆ ನ್ಯಾ. ಪಸಾಯತ್ ಹೇಳಿದ್ದಾರೆ.
ಕನೂನು ತಿದ್ದುಪಡಿಯಾಗಲಿ: ಭಾರತೀಯರ ಕಪ್ಪುಹಣದ ಮಾಹಿತಿಯನ್ನು ಹೊರದೇಶಗಳು ಬಹಿರಂಗಪಡಿಸಲು ತೆರಿಗೆ ಕಾನೂನು ತಿದ್ದುಪಡಿ ಅಗತ್ಯವಿದೆ. ಹೀಗಾಗಿ ತೆರಿಗೆಗಳ್ಳತವನ್ನು ಗಂಭೀರ ಕ್ರಿಮಿನಲ್ ಅಪರಾಧವನ್ನಾಗಿ ಪರಿಗಣಿಸಬೇಕು ಎಂದು ತಂಡದ ಮುಖ್ಯಸ್ಥ ನ್ಯಾ.ಎಂ.ಬಿ. ಶಾ ಸರ್ಕಾರಕ್ಕೆ ನೀಡಿದ ಸಲಹೆ.
ಈ ರೀತಿಯ ಕಾನೂನು ತಿದ್ದುಪಡಿ ವಿದೇಶದಲ್ಲಿ ಇಟ್ಟಿರುವ ಭಾರತೀಯರ ಕಪ್ಪುಹಣ ವಾಪಸ್ ತರಲು ನೆರವು ನೀಡುವುದಷ್ಟೇ ಅಲ್ಲ. ದೇಶದಲ್ಲೂ ತೆರಿಗೆಗಳ್ಳತನ ಮಾಡಿ ಕೂಡಿಟ್ಟ ಹಣಕ್ಕೂ ಕಡಿವಾಣ ಹಾಕಲಿದೆ ಎಂದಿದ್ದಾರೆ.
ಸದ್ಯ ತೆರಿಗೆ ತಪ್ಪಿಸುವುದು ಸಿವಿಲ್ ಅಪರಾಧ. ಹಾಗಾಗಿ ಅದನ್ನು ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ತನಿಖೆ ನಡೆಸಲಾಗುತ್ತದೆ. ವಿದೇಶಿ ಕರೆನ್ಸಿ ಉಲ್ಲಂಘನೆಯನ್ನು ಫೆಮಾ ಅಡಿ ವಿಚಾರಣೆ ನಡೆಸಲಾಗುತ್ತದೆ. ತೆರಿಗೆ ತಪ್ಪಿಸುವುದು ಸಿವಿಲ್ ಅಪರಾಧವಾದರೆ ವಿದೇಶಿ ರಾಷ್ಟ್ರಗಳು ನಮ್ಮ ತನಿಖೆಗೆ ಸಹಕಾರ ನೀಡುವುದಿಲ್ಲ ಎಂದರು.