ನವದೆಹಲಿ: ಮತಾಂತರ ಪ್ರಕರಣ ರಾಜ್ಯಸಭೆಯಲ್ಲಿಯೂ ಮಾರ್ಧನಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.
ಇದೇ ಡಿಸೆಂಬರ್ 25ರಂದು ಅಲಿಘಡದಲ್ಲಿ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿರುವ ಬೃಹತ್ ಮತಾಂತರ ಪ್ರಕ್ರಿಯೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರಾದರೂ, ಇದೇ ವಿಚಾರ ಇದೀಗ ಸಂಸತ್‌ನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯ ಅನಂದ್ ಶರ್ಮಾ ಅವರು ನೀತಿ 267ರ ಅಡಿಯಲ್ಲಿ 'ಒತ್ತಾಯಪೂರ್ವಕ ಮತಾಂತರ' ಕುರಿತಂತೆ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
'ಮತಾಂತರದಂತಹ ಪ್ರಕರಣ ಗಂಭೀರ ವಿಚಾರವಾಗಿದ್ದು, ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ. ಸಾಂಸ್ಕೃತಿಕ ಸಂಘ ಎಂದು ಹೇಳಿಕೊಳ್ಳುತ್ತಿರುವ ಸಂಘಟನೆಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ದೇಶದಲ್ಲಿ ವಿಧ್ವಂಸಕ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದ್ದು, ನಾವು ಅವರ ಪ್ರಯತ್ನಗಳು ಯಶಸ್ವಿಯಾಗಲು ಬಿಡಬಾರದು ಎಂದು ಆನಂದ್ ಶರ್ಮಾ ಹೇಳಿದರು. ಆನಂದ್ ಶರ್ಮಾ ಅವರಿಗೆ ಸಿಪಿಐಎಂ, ಸಮಾಜವಾದಿ ಪಾರ್ಟಿ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಸೂಚಿಸಿದವು.
ಇದಕ್ಕೆ ಉತ್ತರ ನೀಡಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು, ಮತಾಂತರ ಕುರಿತಂತೆ ಡಿಸೆಂಬರ್ 17ರಂದು ಚರ್ಚೆ ನಿಗದಿ ಪಡಿಸಲಾಗಿದೆ. ಡಿಸೆಂಬರ್ 17ರ ಬಳಿಕ ನೀವು ಈ ವಿಚಾರವನ್ನು ಕಲಾಪದಲ್ಲಿ ಪ್ರಶ್ನಿಸಬಹುದು ಎಂದು ಹೇಳಿದರು.
ಇದೇ ಡಿಸೆಂಬರ್ 25ರಂದು ಅಲಿಘಡದಲ್ಲಿ ಹಿಂದೂಪರ ಸಂಘಟನೆಗಳು ಬೃಹತ್ ಮತಾಂತರ ಹಮ್ಮಿಕೊಂಡಿದ್ದು, ಪೊಲೀಸರು ಮಾತ್ರ ಅನುಮತಿ ನಿರಾಕರಿಸಿದ್ದಾರೆ. ಆದರೆ ಪೊಲೀಸರ ಅನುಮತಿಯ ನಿರಾಕರಣೆ ಹೊರತಾಗಿಯೂ ತಾವು ಮತಾಂತರ ಪ್ರಕ್ರಿಯೆ ಮಾಡಿಯೇ ತೀರುತ್ತೇವೆ ಎಂದು ಹಿಂದೂಪರ ಸಂಘಟನೆಗಳು ಹೇಳಿದ್ದವು. ಇದೀಗ ಇದೇ ವಿಚಾರ ಇದೀಗ ಸಂಸತ್‌ನ ಉಭಯ ಸದನಗಳಲ್ಲಿ ಕೋಲಾಹಲವನ್ನು ಉಂಟುಮಾಡಿವೆ.