ಬೆಂಗಳೂರು: ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯದೆ ವಾಹನಗಳನ್ನು ಚಾಲನೆ ಮಾಡುತ್ತಿದ್ದ 'ಟ್ಯಾಕ್ಸಿ ಫಾರ್ ಶ್ಯೂರ್' ಕಚೇರಿ ಮೇಲೆ ದಾಳಿ ಮಾಡಿದ ಜಯನಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಾಹನ ಚಾಲನೆ ಸ್ಥಗಿತಗೊಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಯನಗರ ವಿಭಾಗದ ಪ್ರಾದೇಶಿಕ ಅಧಿಕಾರಿ ಜ್ಞಾನೇಂದ್ರ ಕುಮಾರ್, ಆರ್‌ಟಿಎಯಿಂದ ಅನುಮತಿ ಪಡೆಯದೆ ಕಂಪನಿ ಅಧಿಕಾರಿಗಳು ಸುಮಾರು 3 ಸಾವಿರ ಕ್ಯಾಬ್‌ಗಳನ್ನು ಚಾಲನೆ ಮಾಡುತ್ತಿದ್ದರು.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಜಯನಗರ ರಾಗಿಗುಡ್ಡದ ಬಳಿ ಇರುವ ಕಚೇರಿ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲಿಸಿದಾಗ ಅವರ ಬಳಿ ಯಾವುದೇ ದಾಖಲೆ ಪತ್ತೆಯಾಗಿಲ್ಲ. ಅಲ್ಲದೆ ಆರ್‌ಟಿಎಯಿಂದ ಅನುಮತಿ ಸಹ ಪಡೆದಿಲ್ಲ.
ಅನುಮತಿ ಪಡೆಯದೆ ನೂರಾರು ಕಂಪನಿಗಳಿಗೆ ಅವುಗಳನ್ನು ಹೊಂದಿಸಲಾಗಿದೆ (ಲಿಂಕ್-ಸಿಬ್ಬಂದಿ ಕರೆದೊಯ್ಯಲು ಒಪ್ಪಂದ). ಹಾಗಾಗಿ ಅದನ್ನು ನಿಲ್ಲಿಸುವಂತೆ ಹಾಗೂ ಅಸಲಿ ದಾಖಲೆ ತೋರಿಸಿ ಅನುಮತಿ ಪಡೆಯುವಂತೆ ಸೂಚಿಸಲಾಗಿದೆ. ಕಾರು ಚಾಲಕರಿಗೆ ನೀಡಲಾಗಿದ್ದ ಎರಡು ಮೊಬೈಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಅನುಮತಿ ಪಡೆಯದ ಹೊರತು ವಾಹನ ಚಾಲನೆಗೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.