ಚೆನ್ನೈ/ನವದೆಹಲಿ: ಉತ್ತರ ಪ್ರದೇಶದ ಆಗ್ರಾದಲ್ಲಿ ಹೊತ್ತಿದ್ದ ಕಿಡಿ ಈಗ ಕಾಡ್ಗಿಚ್ಚಾಗಿ ಮಾರ್ಪಾಡಾಗಿದೆ. ಇದೇ ಕಾರಣಕ್ಕೆ ಸಂಸತ್‌ನಲ್ಲಿ, ವಿಶೇಷವಾಗಿ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಯಾಗುತ್ತಿದೆ. ಅದರ ಬೆನ್ನಲ್ಲೇ ಬಲವಂತದ ಮತಾಂತರ ನಿಷೇದಕ್ಕೆ ಕಾನೂನು ತರಬೇಕು ಎಂಬ ವಿಚಾರವೂ ಈಗ ಬೆಂಕಿಗೆ ತುಪ್ಪ ತುರಿದೆ.
ಕೇರಳ ಮತ್ತು ತಮಿಳುನಾಡಿನ ಪ್ರವಾಸದಲ್ಲಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಕಾನೂನಿನ ವಿಚಾರ ಪ್ರಸ್ತಾಪಿಸಿದ್ದಾರೆ. ಚೆನ್ನೈನಲ್ಲಿ ಭಾನುವಾರ ಮಾತನಾಡಿದ ಶಾ. ಮತಾಂತರ ನಿಷೇಧ ಕಾನೂನಿನ ಬಗ್ಗೆ ಕೇಂದ್ರ ಸರ್ಕಾರ ಮುಕ್ತ ಭಾವನೆ ಹೊಂದಿದೆ. ಪ್ರತಿ ಪಕ್ಷಗಳೇ ವಿನಾಕಾರಣ ಗುಲ್ಲೆಬ್ಬಿಸುತ್ತಿವೆ ಎಂದು ಹರಿಹಾಯ್ದಿದ್ದಾರೆ. ಮತಾಂತರ ವಿಚಾರ ಮುಂದಿಟ್ಟುಕೊಂಡು ಸಂಸತ್ತಲ್ಲಿ ವಿನಾಕಾರಣ ಗದ್ದಲ ಎಬ್ಬಿಸಬೇಡಿ.
ನಿಮಗೆ ನಿಜವಾಗಲೂ ಕಾಳಜಿ ಇದ್ದರೆ ಬಲವಂತದ ಮತಾಂತರ ವಿರೋಧಿ ಕಾನೂನು ಜಾರಿಗೆ ಅವಕಾಷ ಮಾಡಿಕೊಡಿ ಎಂದಿದ್ದಾರೆ. ಗಮನಾರ್ಹ ಅಂಶವೆಂದರೆ 'ಭಾರತ ಹಿಂದೂ ರಾಷ್ಟ್ರ' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿರುವ ಬಗ್ಗೆ ಅಮಿತ್ ಶಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಿಜೆಪಿ ಮುಖಂಡ ಶಹನವ ಾಜ್ ಹುಸೇನ್ ಕೂಡ ಶಾ ಹೇಳಿಕೆ ಬೆಂಬಲಿಸಿದ್ದಾರೆ. ಸಂಸತ್ತಿನಲ್ಲಿ ವಿನಾಕಾರಣ ಗದ್ದಲ ಎಬ್ಬಿಸುವ ಬದಲು ಪ್ರತಿಪಕ್ಷಗಳು ಮತಾಂತರ ವಿರೋಧಿ ಕಾನೂನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬೆಂಬಲ; ಬಿಜೆಪಿಯ ಮತಾಂತರ ವಿರೋಧಿ ವಿಧೇಯಕಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಯಾಕೆಂದರೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮಾಡುತ್ತಿರುವುದು ಬಲವಂತದ ಮತಾಂತರವನ್ನೇ ಎಂದು ಕಾಂಗ್ರೆಸ್ ಹೇಳಿದೆ.
ವಿಶ್ವ ಹೃದಯ ಗೆಲ್ತೇವೆ
ನಾವು ಯಾವತ್ತೂ ವಿಶ್ವವನ್ನು ಮತಾಂತರ ಮಾಡ ಬಯಸಿಲ್ಲ. ನಮ್ಮ ಗುರಿಯೇನಿದ್ದರೂ ಎಲ್ಲರ ಹೃದಯ ಗೆಲ್ಲುವುದು! ಹೀಗೆಂದವರು ವಿಎಚ್‌ಪಿ ನಾಯಕ ಸಿಂಘಾಲ್, ದೆಹಲಿಯಲ್ಲಿ ಮಾತನಾಡಿದ ಅವರು, 'ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ತುಳಿಯಲಾಯಿತು. ನಾವು ಹೋರಾಟ ನಡೆಸಬೇಕಾಯಿತು' ಎಂದಿದ್ದಾರೆ.
'ಯಾವತ್ತೂ ಯಾರನ್ನೂ ಮತಾಂತರಿಸುವುದು ನಮ್ಮ ಉದ್ದೇಶ ಅಲ್ಲ, ಆ ಕೆಲಸವನ್ನು ನಾವು ಮಾಡಿಯೂ ಇಲ್ಲ. ಆದರೆ, ವಿವಿಧ ಶಕ್ತಿಗಳು ಧರ್ಮದ ಆಧಾರದ ಮೇಲೆ ವಿಶ್ವದ ಮೇಲೆ ಹಿಡಿತ ಸಾಧಿಸಲು ಹೊರಟಿರುವುದು ನೋಡಿದರೆ ಮತ್ತೊಂದು ವಿಶ್ವಯುದ್ಧ ಅನಿವಾರ್ಯ ಎನ್ನುವ ಸ್ಥಿತಿಯಿಂದೆ' ಎಂದಿದ್ದಾರೆ.
ಕೇರಳ, ಗುಜರಾತಲ್ಲಿ ಮರುಮತಾಂತರ!
ಪ್ರತಿಪಕ್ಷಗಳ ವಿರೋಧದ ನಡುವೆಯೂ ವಿಶ್ವ ಹಿಂದೂ ಪರಿಷತ್ ವಿವಾದಾತ್ಮಕ 'ಘರ್ ವಾಪಸಿ'ಯನ್ನು ಮುಂದುವರಿಸಿದೆ. ಗುಜರಾತ್‌ನಲ್ಲಿ 500 ಮಂದಿಯನ್ನು ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡಿದೆ. ವಲ್ಸಾಡ್‌ನ ಗುಡ್ಡಗಾಡು ಪ್ರದೇಶವಾದ ಅರ್ನಾಯಿ ಪ್ರದೇಶದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ವೇಳೆ ಕೇರಳದ ಆಲಪ್ಪುಳದಲ್ಲಿಯೂ ಕೂಡ ದಲಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ 50 ಮಂದಿಯನ್ನು ಮತ್ತೆ ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡಿದೆ.