ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನಧನ ಯೋಜನೆ ಈಗ ತಿಹಾರ್ ಜೈಲಿನ ಬಾಗಿಲನ್ನೂ ತಟ್ಟಿದೆ. ಖೈದಿಗಳಿಗೆ ಇದು ಹೊಸ ವರ್ಷದ ಉಡುಗೊರೆ.
ಅಚ್ಚರಿ ಪಡಬೇಡಿ. ದೆಹಲಿಯ ಅತಿ ಭದ್ರತೆಯ ತಿಹಾರ್ ಜೈನಿಲನಲ್ಲಿರುವ ಖೈದಿಗಳಿಗೆ ಜನಧನ ಯೋಜನೆಯನ್ವಯ ಜೀವವಿಮೆ ಮತ್ತು ಅಪಘಾತ ವಿಮೆ ಒದಗಿಸಲು ಸರ್ಕಾರ ಮುಂದಾಗಿದೆ. ಅದರಂತೆ, ಖೈದಿಗಳು ಶಿಕ್ಷೆ ಅನುಭವಿಸುತ್ತಿರುವಾಗಲೇ 1 ಲಕ್ಷ ರು. ಮೊತ್ತದ ಅಪಘಾತ ವಿಮೆ ಮತ್ತು 30 ಸಾವಿರ ಮೊತ್ತದ ಜೀವ ವಿಮೆ ಸೌಲಭ್ಯ ಪಡೆಯಲಿದ್ದಾರೆ.
4, 500 ಖೈದಿಗಳಿಗೆ ಅನುಕೂಲ
ದೇಶದ ಎಲ್ಲ ನಾಗರೀಕರಿಗೂ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ನಿಟ್ಟನಲ್ಲಿ ಪ್ರಧಾನಿ ಮೋದಿ ಅವರು ಆಗಸ್ಟ್ 28ರಂದು ಜನಧನ ಯೋಜನೆಗೆ ಚಾಲನೆ ನೀಡಿದ್ದರು. ಈಗ ಈ ಯೋಜನೆಯ ಲಾಭವನ್ನು ಖೈದಿಗಳಿಗೂ ವಿಸ್ತರಿಸಲಾಗಿದೆ. ದೋಷಿ ಎಂದು ಸಾಬೀತಾಗಿರುವ ಸುಮಾರು 4, 500ರಷ್ಟು ಮಂದಿ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬ್ಯಾಂಕಿಂಗ್ ಸೌಲಭ್ಯ ಒದಗಿಸುತ್ತಿರುವ ಇಂಡಿಯನ್ ಬ್ಯಾಂಕ್ ಸಹಯೋಗದಲ್ಲಿ ಈ ಯೋಜನೆ ಜಾರಿ ಮಾಡಲಾಗುತ್ತದೆ.
ಇಂದಿನಿಂದಲೇ ಪ್ರಕ್ರಿಯೆ ಆರಂಭ
ಸೋಮವಾರ ಬ್ಯಾಂಕಿನ ಸಿಬ್ಬಂದಿ ತಿಹಾರ್ ಜೈಲಿಗೆ ತೆರಳಿ, ಯೋಜನೆ ಬಗ್ಗೆ ಖೈದಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜೈಲಿನ ಆವರಣದಲ್ಲೇ ದಾಖಲೆಗಳ ಸಂಗ್ರಹ ಹಾಗೂ ಅರ್ಜಿ ತುಂಬಿಸುವ ಕಾರ್ಯ ನಡೆಯಲಿದೆ. ಒಂದು ತಿಂಗಳೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಜೈಲಿನಲ್ಲಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಏನಾದರೂ ಸಂಭವಿಸಿದಲ್ಲಿ ಖೈದಿಗಳಿಗೆ ಈ ವಿಮೆ ನೆರವಿಗೆ ಬರಲಿದೆ ಎಂದು ಡಿಐಜಿ ಮುಕೇಶ್ ಪ್ರಸಾದ್ ಹೇಳಿದ್ದಾರೆ. ವಿಶೇಷವೆಂದರೆ, ಜೈಲಿನಲ್ಲಿ ಖೈದಿಗಳು ದುಡಿದು ಸಂಪಾದಿಸುವ ಹಣವನ್ನು ಆ ಖಾತೆಯಲ್ಲಿಡಬಹುದು. ಅಗತ್ಯ ಬಿದ್ದಲ್ಲಿ ಅವರ ಕುಟುಂಬ ಸದಸ್ಯರಿಗೆ ಈ ಖಾತೆಯ ಮೂಲಕ ಹಣವನ್ನು ಒದಗಿಸಬಹುದು ಎಂದೂ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಆಧಾರ್ ಕಾರ್ಡ್ ಹೊಂದಿದವಿರಗೆ ಖಾತೆ ತೆರೆಯುವುದು ಸುಲಭ. ಹಾಗಾಗಿ ಮೊದಲಿಗೆ ಅವರನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ನಂತರ ಗುರುತಿನ ದಾಖಲೆ ಹೊಂದಿರುವ ಇತರರಿಗೆ ಖಾತೆ ಮಾಡಿಕೊಡಲಾಗುವುದು.
-ಟಿ.ಎಂ. ಭಾಸಿನ್
ಇಂಡಿಯನ್ ಬ್ಯಾಂಕ್ ಅಧ್ಯಕ್ಷ