ಭೋಪಾಲ್: ಭಾರತ ಹಿಂದೂ ರಾಷ್ಟ್ರ ಎಂದು ಹೇಳಿದ್ದ ರಾಷ್ಟ್ರೀಯ ಸ್ವಯಂಸೇವಾ ಸಂಘಟನೆ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮಾತುಗಳನ್ನು ವಿಶ್ವ ಹಿಂದೂ ಪರಿಷತ್ ವೇದವಾಕ್ಯವಾಗಿ ಪರಿಗಣಿಸಿದೆ ಎಂದು ವಿಹಿಂಪ ಮುಖಂಡ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಭಾರತವನ್ನು ಸಂಪೂರ್ಣವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡುವುದೇ ತಮ್ಮ ಗುರಿ ಎಂದು ತೊಗಾಡಿಯಾ ನುಡಿದಿದ್ದಾರೆ. ಭಾರತದಲ್ಲಿ ಶೇ. 100ರಷ್ಟು ಹಿಂದೂಗಳು ಇರುವಂತೆ ಮಾಡುತ್ತೇವೆ. ಸದ್ಯ ಭಾರತದಲ್ಲಿ ಹಿಂದೂಗಳ ಪ್ರಮಾಣ ಶೇ. 82ರಷ್ಟಿದೆ ಎಂದರು.
ಈ ಅಂಕಿ ಅಂಶಗಳನ್ನು ಎರಿಸುತ್ತೇವೆ ಹೊರತು ಯಾವುದೇ ಕಾರಣಕ್ಕೂ ಕುಗ್ಗಲು ಬಿಡುವುದಿಲ್ಲ ಎಂದು ತೊಗಾಡಿಯಾ, ಹಿಂದೂಗಳು ಈ ದೇಶದಲ್ಲಿ ಅಲ್ಪಸಂಖ್ಯಾತರಾಗುವುದನ್ನು ನಾವು ಸಹಿಸುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಶಪಥ ಮಾಡಿದ್ದಾರೆ.
ಹಣ ಮತ್ತಿತರ ಪ್ರಲೋಭನೆ, ಆಮಿಷಗಳನ್ನೊಡ್ಡಿ ಹಿಂದೂಗಳನ್ನು ಮತಾಂತರ ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ತೊಗಾಡಿಯಾ, ಈ ದೇಶದಲ್ಲಿರುವ ಪ್ರತಿಯೊಬ್ಬ ಹಿಂದೂವಿಗೂ ಭದ್ರತೆ ನೀಡಲು ಬದ್ಧವಾಗಿದ್ದೇವೆ ಎಂದರು. ಅಲ್ಲದೆ, ಹಿಂದೂ ಧರ್ಮದಲ್ಲಿ ಅನಿಷ್ಟವಾಗಿ ಕಾಡುತ್ತಿರುವ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವುದು ಸಂಘಟನೆಯ ಗುರಿ ಎಂದು ತೊಗಾಡಿಯಾ ಹೇಳಿದ್ದಾರೆ.
ಉಭಯ ಸದನಗಳಲ್ಲಿ ಮತಾಂತರ ಕುರಿತಂತೆ ವಿಪಕ್ಷಗಳು ಗದ್ದಲವೆಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದರೆ. ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಮತಾಂತರವನ್ನು ಮಾಡಿ ತೀರುತ್ತೇವೆ ಎಂಬ ಹೇಳಿಕೆಗಳನ್ನು ನೀಡುತ್ತಿರುವುದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ನೂಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.