ಕೋಟಾ: ನೀವು ನಮ್ಮ ಪಕ್ಷಕ್ಕೆ ಮತ ಹಾಕದೇ ಇದ್ದರೆ, ಇಲ್ಲಿ ವಾಸಿಸಲೇಬೇಡಿ. ರಾಜಸ್ಥಾನದ ಬಿಜೆಪಿ ಶಾಸಕರೊಬ್ಬರು ಮತದಾರರನ್ನು ಬೆದರಿಸಿದ ಪರಿಯಿದು. ಇತ್ತೀಚೆಗೆ ಕೋಟಾದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಬಿಜೆಪಿ ಶಾಸಕ ಭವಾನಿ ಸಿಂಗ್ ರಾಜಾವತ್ ಅವರು ಮತದಾರರಿಗೆ ಬೆದರಿಕೆ ಹಾಕಿರುವ ವಿಡಿಯೋ ಈಗ ಬಹಿರಂಗವಾಗಿದ್ದು, ಬಿಜೆಪಿಗೆ ಮುಜುಗರ ಉಂಟುಮಾಡಿದೆ.
ನೀವು ಬಿಜೆಪಿಗೆ ಮತ ಹಾಕಲೇಬೇಕು. ಇಲ್ಲದಿದ್ದರೆ ನೀವೀಗ ಇರುವ ಅಕ್ರಮ ಮನೆಗಳಿಂದ ನಿಮ್ಮೆಲ್ಲರನ್ನೂ ಹೊರದಬ್ಬುತ್ತೇನೆ ಎಂದು ಭವಾನಿ ಸಿಂಗ್ ಮತದಾರರಿಗೆ ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿರುವ ಭವಾನಿ ಸಿಂಗ್, 'ನಾನು ಅವಹೇಳನಕಾರಿ ಪದಗಳನ್ನು ಬಳಸಿಲ್ಲ. ನಾನು ಯಾವತ್ತೂ ಬಡವರಿಗೆ ಸಹಾಯ ಮಾಡಿದ್ದೇನೆ. ಅವರೆಲ್ಲರಿಗೂ ಇಲ್ಲಿರಲು ಅವಕಾಶ ಮಾಡಿಕೊಟ್ಟಿದ್ದೇ ನಾನು. ಹಾಗಾಗಿ ನಮ್ಮ ಪಕ್ಷಕ್ಕೆ ಮತ ಹಾಕದಿದ್ದರೆ ನೀವಿಲ್ಲಿರಬೇಡಿ ಎಂದು ಹೇಳಿದ್ದೆ' ಎಂದಿದ್ದಾರೆ.
ಶಿಸ್ತು ಸಮಿತಿ ನೋಡಿಕೊಳ್ಳುತ್ತೆ: ಪಕ್ಷದ ಶಾಸಕರು ಮತದಾರರಿಗೆ ಬೆದರಿಕೆ ಹಾಕಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ, ಅವರನ್ನು ಶಿಸ್ತು ಸಮಿತಿ ನೋಡಿಕೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.