ದೇಶ

ಮಠಾಂತರ ಹುನ್ನಾರ

Vishwanath S

ನವದೆಹಲಿ: ಮಠಗಳ ಧಾರ್ಮಿಕ ಮತ್ತು ಆರ್ಥಿಕ ಸ್ವಾಯತ್ತತೆಗೆ ಧಕ್ಕೆ ತರುವ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ ತಿದ್ದುಪಡಿ ವಿಧೇಯಕ-2014ದ ವಿರುದ್ಧ ಮಠಾಧಿಪತಿಗಳೊಂದಿಗೆ ಅತ್ಯುಗ್ರ ಹೋರಾಟ ನಡೆಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಸೋಮವಾರ ನಡೆದ ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಾನಾ ಮಠಾಧೀಶರೊಂದಿಗೆ ಸಮಾಲೋಚನೆ ನಡೆಸಿ ಅವರ ಅಭಿಪ್ರಾಯ ಪಡೆದು ಹೋರಾಟದ ರೂಪುರೇಷೆ ನಿರ್ಧರಿಸಲಾಗುತ್ತದೆ ಎಂದು ಸಭೆಯ ನಂತರ ಪ್ರಹ್ಲಾದ್ ಜೋಶಿ ಸುದ್ದಿಗಾರರಿಗೆ ತಿಳಿಸಿದರು.

ಏತನ್ಮಧ್ಯೆ ರಾಜ್ಯಾದ್ಯಂತ ನಾನಾ ಮಠಾಧೀಶರು, ಸಾರ್ವಜನಿಕರು, ಹಲವು ಸ್ತರದ ನಾಯಕರಿಂದ ತಿದ್ದುಪಡಿ ವಿಧೇಯಕದ ವಿರುದ್ಧ ವ್ಯಕ್ತವಾಗಿರುವ ಆಕ್ರೋಶ ಸೋಮವಾರ ಇನ್ನಷ್ಟು ಭುಗಿಲೆದ್ದಿದ್ದು, ಸ್ಪಷ್ಟ ಹೋರಾಟದ ಸೂಚನೆ ಕಂಡು ಬರುತ್ತಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ವಕ್ತಾರ ಸಿ.ಟಿ ರವಿ ಸಹ ಪಕ್ಷದ ಹೋರಾಟದ ನಿಲುವನ್ನೇ ಪ್ರತಿಪಾದಿಸಿದ್ದು, ಕೇವಲ ಹಿಂದೂ ಮಠಗಳ ವಿರುದ್ಧ ಸಂಚು ರೂಪಿಸಿರುವ ರಾಜ್ಯ ಸರ್ಕಾರದ ವಿರುದ್ಧ, ಅದರ ನಿಲುವು ವಿರೋಧಿಸಿ ಬೀದಿಗಿಳಿಯುವಂತೆ ಎಲ್ಲ ಮಠಾಧೀಶರಲ್ಲಿ ಮನವಿ ಮಾಡಿದೆ. ವಿಧೇಯಕ ಹಿಂಪಡೆಯದಿದ್ದರೆ ಇದೇ ವಿಚಾರ ಸರ್ಕಾರದ ಪತನಕ್ಕೆ ಕಾರಣ ಆಗಬಹುದು ಎಂದು ಎಚ್ಚರಿಸಿದ್ದಾರೆ.

ಹಿಂಪಡೆವವರೆಗೂ ಹೋರಾಟ: ಮಠ ಮಂದಿರಗಳನ್ನು ಸರಳ ದೂರು ಆಧರಿಸಿ, ಅಥವಾ ತನಗೆ ಬೇಕಾದಾಗ ವಶಪಡಿಸಿಕೊಳ್ಳುವ ವಿಧೇಯಕ ಮಂಡನೆ ಮಾಡಿರುವುದನ್ನು ಕೋರ್ ಕಮಿಟಿ ಸಭೆಯಲ್ಲಿ ತೀವ್ರವಾಗಿ ಖಂಡಿಸಿದ್ದೇವೆ. ಮಾತುಕತೆ ನಡೆಸಿ ಹೋರಾಟ ರೂಪಿಸುತ್ತೇವೆ. ಮಠಾಧಿಪತಿಗಳನ್ನು ರಾಜಕೀಯ ಪ್ರತಿಭಟನೆಗೆ ಕರೆಯುವುದು ನಮ್ಮ ಇಚ್ಛೆ ಅಲ್ಲ, ಈಗಾಗಲೇ ಮಠಾಧಿಪತಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ವಿಧೇಯಕವನ್ನು ವಾಪಸ್ ಪಡೆಯುವರೆಗೂ ಬಿಜೆಪಿ ಅತ್ಯುಗ್ರ ಹೋರಾಟ ಮಾಡಲಿದೆ ಎಂದು ಜೋಶಿ ಹೇಳಿದರು.

ಮಧ್ಯಪ್ರವೇಶ ಇಲ್ಲ
ಮಠ ಮಾನ್ಯಗಳ ಆಡಳಿತದಲ್ಲಿ ಮಧ್ಯಪ್ರವೇಶಿಸುವ ಇಚ್ಛೆ ಸರ್ಕಾರಕ್ಕಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಸದನದಲ್ಲಿ ವಿಧೇಯಕ ಮಂಡಿಸಿದ್ದೇವೆ. ಹಾಗಂತ ಅದು ಮಠಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಉದ್ದೇಶವಲ್ಲ. ಮಠಗಳನ್ನು ಸರ್ಕಾರದ ವಶಕ್ಕೆ ಪಡೆಯಬೇಕು. ಕಡಿವಾಣ ಹಾಕಬೇಕು ಎಂಬ ಯಾವುದೇ ಇಚ್ಛೆ ಸರ್ಕಾರಕ್ಕೆ ಇಲ್ಲ. ನನ್ನ ಆದೇಶದಂತೆಯೇ ಈಗಾಗಲೇ ಕಾನೂನು ಸಚಿವರು ಹೇಳಿಕೆ ನೀಡಿದ್ದು, ಯಾರೂ ಆಂತಕ ಪಡುವ ಪ್ರಶ್ನೆ ಇಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ

SCROLL FOR NEXT