ದೇಶ

ಮೈಲಸಂದ್ರದಲ್ಲಿ ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ: ಉಲ್ಲಂಘನೆಯಾಗಿಲ್ಲ ಅರಣ್ಯ ನೀತಿ

ಬೆಂಗಳೂರು: ಡಾ.ವಿಷ್ಣುವರ್ಧನ್ ಸ್ಮಾರಕ ಪ್ರತಿಷ್ಠಾನಕ್ಕೆ ಮೈಲಸಂದ್ರ ಗ್ರಾಮದಲ್ಲಿ 2 ಎಕರೆ ಜಾಗ ನೀಡುವಲ್ಲಿ ಕರ್ನಾಟಕ ಅರಣ್ಯ ನೀತಿಯ ಉಲ್ಲಂಘನೆಯಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಮೈಲಸಂದ್ರ ಗ್ರಾಮದಲ್ಲಿ ತುರಹಳ್ಳಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಸರ್ವೆ ನಂ.22ರಲ್ಲಿ 29.28 ಎಕರೆ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಪ್ರಾದೇಶಿಕ ಆಯುಕ್ತರು ಮಂಜೂರು ಮಾಡಿದ್ದರು.

ಈ ಭೂಮಿಯಲ್ಲಿ 2 ಎಕರೆಯನ್ನು ಸ್ಮಾರಕ ನಿರ್ಮಾಣಕ್ಕೆ ನೀಡಲಾಗಿದೆ. ಅರಣ್ಯ ನೀತಿಯ ಸೆಕ್ಷನ್ 41(2)ರ ಪ್ರಕಾರ, ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಒಪ್ಪಿಗೆ ಮೇರೆಗೆ ಭೂಮಿ ಮಂಜೂರು ಮಾಡುವ ಅಧಿಕಾರ ಹೊಂದಿದ್ದಾರೆ. ಈ ನೀತಿಯಡಿ ಭೂಮಿ ಮಂಜೂರು ಮಾಡಲಾಗಿದ್ದು, ಕಂದಾಯ ಇಲಾಖೆ, ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಲಾಗಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೂ ದಾಖಲಾಗಿಲ್ಲ ಎಂದು ರಾಜ್ಯ ಸರ್ಕಾರದ ಅಡ್ವೋಕೇಟ್ ಸ್ಪಷ್ಟಪಡಿಸಿದ್ದಾರೆ. ಮಂಜೂರು ಮಾಡಿರುವ 2 ಎಕರೆಯಲ್ಲಿ 0.25 ಗಿಂತ ಕಡಿಮೆ ಸಸ್ಯ ಸಾಂದ್ರತೆಯಿದ್ದು, ಇದರಿಂದ ಅರಣ್ಯಕ್ಕೂ ಯಾವುದೇ ಹಾನಿಯಾಗುವುದಿಲ್ಲ. ಸಸ್ಯಸಾಂದ್ರತೆ 0.25ಗಿಂತ ಹೆಚ್ಚಿದ್ದರೆ ಸಂರಕ್ಷಿತ ಅರಣ್ಯ ಎಂದು ಘೋಷಿಸಲಾಗುತ್ತದೆ. ಬೆಲೆ ಬಾಳುವ ಮರ ಅಥವಾ ಅಪರೂಪದ ಸಸ್ಯವರ್ಗವಿಲ್ಲದ ಈ ಪ್ರದೇಶ ಕುರುಚಲು ಗಿಡಗಳಿಂದ ಮಾತ್ರ ಕೂಡಿದ್ದು, ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿದೆ.

ಈ ಹಿಂದೆ ಜಾಗದಲ್ಲಿ ಸ್ಮಾರಕ ನಿರ್ಮಿಸಲು ಗ್ರಾಮಸ್ಥರಿಂದ ಆಕ್ಷೇಪಣೆ ಆಹ್ವಾನಿಸಲಾಗಿತ್ತು. 30 ದಿನಗಳ ಆಕ್ಷೇಪಣೆಯ ಕಾಲಾವಕಾಶದಲ್ಲಿ ಯಾವುದೇ ದೂರು, ಅಭಿಪ್ರಾಯಗಳೂ ಸಲ್ಲಿಕೆಯಾಗಿಲ್ಲ. ಆದ್ದರಿಂದ ಈ ಜಾಗ ನೀಡಲು ಯಾವುದೇ ಕಾನೂನು ತೊಡಕುಗಳಿರಲಿಲ್ಲ ಎಂದರು.

ನಟಿ ಭಾರತಿ ವಿಷ್ಣುವರ್ಧನ್ ಮಾತನಾಡಿ, ಸ್ಮಾರಕಕ್ಕೆ ಕಾನೂನು ಪ್ರಕಾರವೇ ಭೂಮಿ ಮಂಜೂರು ಮಾಡಿದ್ದು, ಕಾರಣವಿಲ್ಲದೆ ವಿವಾದ ಸೃಷ್ಠಿಸಲಾಗಿದೆ. 5 ವರ್ಷಗಳಿಂದ ಅಭಿಮಾನಿಗಳು ಸ್ಮಾರಕ ನಿರ್ಮಾಣಕ್ಕೆ ಕಾಯುತ್ತಿದ್ದು, ಯಾವುದೇ ವಿವಾದಗಳಿಲ್ಲದೆ ಸ್ಮಾರಕ ನಿರ್ಮಾಣವಾಗಲಿದೆ. 11 ಕೋಟಿ ವೆಚ್ಚದಲ್ಲಿ ಒಂದೂವರೆ ವರ್ಷದಲ್ಲಿ ಸ್ಮಾರಕ ಪೂರ್ಣಗೊಳ್ಳಲಿದೆ. ಡಿ.30ರಂದು ಸಿಎಂ ಸಿದ್ದರಾಮಯ್ಯ ಸ್ಮಾರಕದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು. ನಟ ಅನಿರುದ್ಧ್, ಜಿಲ್ಲಾಧಿಕಾರಿ ವಿ.ಶಂಕರ್ ಹಾಜರಿದ್ದರು.

SCROLL FOR NEXT