ಬೆಂಗಳೂರು: ಮದ್ಯಾಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಶನಿವಾರ ರಾತ್ರಿ 99 ಸ್ಥಳಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ನಗರ ಸಂಚಾರ ಪೊಲೀಸರು, 928 ವಾಹನ ಚಾಲಕರ ವಿರುದ್ಧ ದೂರು ದಾಖಲಿಸಿದ್ದಾರೆ.
ರಾತ್ರಿ 9 ರಿಂದ ಮುಂಜಾನೆ 2 ಗಂಟೆಯವರೆಗೆ ನಡೆದ ಕಾರ್ಯಾಚರಣೆ ವೇಳೆ 11,812 ವಾಹನಗಳ ತಪಾಸಣೆ ನಡೆಸಿದ್ದು, ಈ ವೇಳೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡುತ್ತಿದ್ದ 924 ಪುರುಷ ಹಾಗೂ ನಾಲ್ವರು ಮಹಿಳಾ ಚಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಕುಮಾರಸ್ವಾಮಿ ಲೇಜೌಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಂತ ಹೆಚ್ಚು ಅಂದರೆ 52 ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ 3 ಬಸ್ಸು, 12 ಲಾರಿ, 30 ಆಟೋ, 129 ಕಾರು, 732 ದ್ವಿಚಕ್ರ ವಾಹನ, 8 ಮ್ಯಾಕ್ಸಿ ಕ್ಯಾಬ್ ಮತ್ತು 10 ಟೆಂಪೋ ಚಾಲಕರ ವಿರುದ್ಧ ಕ್ರಮ ಜರುಗಿಸಲಾಗಿದೆ. ಪ್ರಕರಣವನ್ನು ನ್ಯಾಯಾಲಯದಲ್ಲಿ ಇತ್ಯರ್ಥ ಮಾಡಿಕೊಳ್ಳುವಂತೆ ಚಾಲಕರಿಗೆ ಸೂಚಿಸಿದ್ದು, ಈ ವೇಳೆ ವಶಪಡಿಸಿಕೊಂಡಿರುವ ಚಾಲನಾ ಪತ್ರಗಳನ್ನು ಅಮಾನತುಪಡಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.