ಇಸ್ಲಾಮಾಬಾದ್: ಮುಂಬೈ ದಾಳಿ ಪ್ರಕರಣದ ಪ್ರಮುಖ ರೂವಾರಿ ಮತ್ತು ಲಷ್ಕರ್ ಇ ತೊಯ್ಬಾ ಮುಖ್ಯ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿಯ ಬಂಧನ ಆದೇಶವನ್ನು ಇಸ್ಲಾಮಾಬಾದ್ ಹೈಕೋರ್ಟ್ ಅಮಾನತು ಮಾಡಿದೆ.
ಈ ಹಿಂದೆ ಉಗ್ರ ನಿಗ್ರಹ ನ್ಯಾಯಾಲಯ ನೀಡಿದ್ದ ಜಾಮೀನನ್ನು ರದ್ದು ಮಾಡಿದ್ದ ಪಾಕಿಸ್ತಾನ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದ ಉಗ್ರ ಲಖ್ವಿ, ಇಸ್ಲಾಮಾಬಾದ್ ನ್ಯಾಯಾಲಯದ ಮೊರೆ ಹೋಗಿದ್ದ. ಹೀಗಾಗಿ ಲಖ್ವಿ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ಲಖ್ವಿಯ ಬಂಧನ ಆದೇಶವನ್ನು ಇಂದು ಅಮಾನತುಗೊಳಿಸಿದೆ. ಇಸ್ಲಾಮಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರಾದ ನೂರ್-ಉಲ್-ಹಕ್ ಖುರೇಷಿ ಅವರು ಈ ಆದೇಶವನ್ನು ಹೊರಡಿಸಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಇದೇ ಡಿಸೆಂಬರ್ 19ರಂದು ಪಾಕಿಸ್ತಾನ ಉಗ್ರ ನಿಗ್ರಹ ವಿಶೇಷ ನ್ಯಾಯಾಲಯ ಝಕಿ-ಉರ್-ರೆಹಮಾನ್ ಲಖ್ವಿಗೆ ಜಾಮೀನು ಮಂಜೂರು ಮಾಡಿತ್ತು. ಅಲ್ಲದೆ ಜಾಮೀನಿಗಾಗಿ 5 ಲಕ್ಷ ರು. ಭದ್ರತಾ ಠೇವಣಿ ಇಟ್ಟು ಜಾಮೀನು ಪಡೆಯುವಂತೆ ಸೂಚಿಸಿತ್ತು. ಬಳಿಕ ಲಖ್ವಿಗೆ ಜಾಮೀನು ನೀಡಿದ್ದರ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಾಲಯ, ಜಾಮೀನು ಮಂಜೂರಾತಿಗೆ ಕಾನೂನಿನಲ್ಲಿರುವ ಲೋಪದೋಷಗಳೇ ಕಾರಣ ಮತ್ತು ಪ್ರಕರಣದಲ್ಲಿ ಲಖ್ವಿ ಕೈವಾಡದ ಕುರಿತು ಯಾವುದೇ ಪ್ರಮುಖ ಸಾಕ್ಷ್ಯಾಧಾರಗಳಿರಲಿಲ್ಲ ಎಂದು ಹೇಳಿತ್ತು.
ಆದರೆ ಉಗ್ರ ಲಖ್ವಿಗೆ ಜಾಮೀನು ನೀಡಿದ್ದನ್ನು ವಿರೋಧಿಸಿದ್ದ ಭಾರತ, ಲೋಕಸಭಾ ಕಲಾಪದಲ್ಲಿ ಪಾಕಿಸ್ತಾನ ನ್ಯಾಯಾಲಯ ನೀಡಿದ್ದ ಆದೇಶದ ವಿರುದ್ಧ ಖಂಡನಾ ನಿರ್ಣಯವನ್ನು ಮಂಡಿಸಿತ್ತು. ಅಲ್ಲದೆ ಈ ಕುರಿತು ಸ್ಪಂಧಿಸುವಂತೆ ವಿಶ್ವ ಸಮುದಾಯಕ್ಕೆ ಮನವಿ ಮಾಡಿತ್ತು. ಬಳಿಕ ಪಾಕಿಸ್ತಾನದಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಿಂದಾಗಿ ಸಾರ್ವಜನಿಕ ಆದೇಶ ನಿರ್ವಹಣೆಯ ನೆಪ ನೀಡಿ ಪಾಕಿಸ್ತಾನ ಸರ್ಕಾರ ಲಖ್ವಿಗೆ ನೀಡಿದ್ದ ಜಾಮೀನನ್ನು ರದ್ದು ಪಡಿಸಿತ್ತು.
ಮುಂಬೈ ದಾಳಿ ಪ್ರಕರಣದಲ್ಲಿ ಜೀವಂತವಾಗಿ ಸೆರೆ ಸಿಕ್ಕಿದ್ದ ಉಗ್ರ ಅಜ್ಮಲ್ ಕಸಬ್‌ನ ತಪ್ಪೋಪ್ಪಿಗೆ ಹೇಳಿಕೆಯ ಆಧಾರದ ಮೇಲೆ 2009 ಫ್ರೆಬ್ರವರಿ ತಿಂಗಳಲ್ಲಿ ಲಖ್ವಿಯನ್ನು ಬಂಧಿಸಲಾಗಿತ್ತು.