ವಾರಣಾಸಿ: ದೇಶದಲ್ಲಿ ಕೃಷಿ ನಂತರ ಜವಳಿ ಉದ್ಯಮ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ಯಮವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದರು.
ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸಿ ಪ್ರಧಾನಿ ಗದ್ದುಗೆ ಏರಿದ್ದ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ವಾರಣಾಸಿಗೆ ತೆರಳಿ ವಾರಣಾಸಿಯ ಲಾಲ್‌ಪುರ್‌ನಲ್ಲಿ ನೇಕಾರರ ವ್ಯಾಪಾರ ಸೌಲಭ್ಯ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದರು.
ಬಳಿಕ ಮಾತನಾಡಿದ ಮೋದಿ ಅವರು, ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಇಲ್ಲಿ ಹೆಚ್ಚಾಗಿ ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಕೃಷಿ ದೇಶದಲ್ಲಿನ ಹೆಚ್ಚಿನ ಜನರಿಗೆ ಉದ್ಯೋಗವಕಾಶ ಒದಗಿಸಿದರೆ ಆನಂತರ ಹೆಚ್ಚು ಉದ್ಯೋಗವಕಾಶವನ್ನು ಸೃಷ್ಟಿಸುವ ಉದ್ಯಮ ಎಂದರೇ ಅದು ಜವಳಿ ಕ್ಷೇತ್ರ ಎಂದರು.
ವಾರಣಾಸಿಯ ಬನಾರಸ್ ಸೀರೆಗಳು ದೇಶ ವಿದೇಶದಲ್ಲಿ ಹೆಚ್ಚು ಖ್ಯಾತಿಗೊಳಿಸಿದೆ. ಹೀಗಾಗಿ ನೇಕಾರರ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ಆಧುನಿಕ ತಂತ್ರಜ್ಞಾನ ಅವಳಡಿಸಲು ನೇಕಾರರಿಗೆ ಕೇಂದ್ರ ಸರ್ಕಾರ ಸಹಕಾರ ನೀಡಲಿದೆ ಎಂದರು. ಜಾಗತಿಕ ಮಟ್ಟದಲ್ಲಿ ಇತರ ರಾಷ್ಟ್ರಗಳು ಹೆಚ್ಚಾಗಿ ಸವಾಲು ಒಡ್ಡುತ್ತಿವೆ. ಈ ಸವಾಲುಗಳ ನಡುವೆ ನೇಕಾರರು ಆಧುನಿಕ ಗ್ರಾಹಕರನ್ನು ಸೆಳೆಯುವುದು ಕಷ್ಟಕರವಾಗಿದೆ. ಹೀಗಾಗಿ ತಂತ್ರಜ್ಞಾನದ ಅವಿಷ್ಕಾರದೊಂದಿಗೆ ಹೊಸ-ಹೊಸ ಯಂತ್ರಗಳನ್ನು ನಿರ್ಮಾಣ ಮಾಡಬೇಕಿದೆ ಎಂದರು.
ರಾಜ್ಯದಲ್ಲಿ ಜವಳಿ ಉತ್ಪನ್ನದ ಗುಣಮಟ್ಟ ಕಾಪಾಡಲು ಕೇಂದ್ರದ ಅಗತ್ಯತೆ ಇದೆ. ಸದ್ಯ ಜವಳಿ ಕ್ಷೇತ್ರ ನಶಿಸುವ ಹಾದಿಯಲ್ಲಿದ್ದು, ಹೊಸ ತಲೆಮಾರು ಜವಳಿ ಉದ್ಯಮವನ್ನು ಗೌರವಿಸುತ್ತಿಲ್ಲ ಎಂದು ವಿಷಾಧಿಸಿದರು. ಇಂದು ಪ್ರಪಂಚದಲ್ಲಿ ಇ-ಉದ್ಯಮಿ ಜಾರಿಯಲ್ಲಿದೆ. ಹೀಗಾಗಿ ನಾವು ಇ-ಕಾಮರ್ಸ್ ಮೂಲಕ ವಿಶ್ವಮಟ್ಟದಲ್ಲಿ ಬನಾರಸ್ ಉತ್ಪನ್ನವನ್ನು ಖ್ಯಾತಿಗೊಳಿಸಬೇಕಿದೆ. ಸದ್ಯಕ್ಕೆ ಜವಳಿ ಕ್ಷೇತ್ರದ ಕೆಲಸಗಾರರಿಗೆ ಆರ್ಥಿಕ ಸಹಾಯಬೇಕಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನಧನ್ ಯೋಜನೆ ಕೆಲಸಗಾರರಿಗೆ ಸಹಾಯಕವಾಗಲಿದೆ ಎಂದರು.
ಜಯಪುರ ಗ್ರಾಮವನ್ನು ದತ್ತು ಪಡೆದ ಮೋದಿ
ಉತ್ತರಪ್ರದೇಶ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮೋದಿ ಇಂದು ಅದೇ ಕ್ಷೇತ್ರದ ಜಯಪುರ ಗ್ರಾಮವನ್ನು ದತ್ತು ಪಡೆದಿದ್ದಾರೆ.
ಗ್ರಾಮವೊಂದನ್ನು ದತ್ತು ಪಡೆದು ಆದರ್ಶ ಗ್ರಾಮವನ್ನಾಗಿ ನಿರ್ಮಿಸುವಂತೆ ಸಂಸದರಿಗೆ ಕರೆ ನೀಡಿದ್ದ ಮೋದಿ ಅವರು, ಮೊದಲಿಗೆ ತಾವೇ ಗ್ರಾಮವೊಂದನ್ನು ದತ್ತು ಪಡೆದಿದ್ದಾರೆ. ಜಯಪುರ ಗ್ರಾಮವನ್ನು ದತ್ತು ಪಡೆದಿರುವ ಮೋದಿ ಗ್ರಾಮವನ್ನು ಯಾವ ಮಟ್ಟಿಗೆ ಅಭಿವೃದ್ಧಿ ಪಡಿಸುತ್ತಾರೆ ಎಂದು ಕಾದು ನೋಡಬೇಕಿದೆ.
ಗ್ರಾಮಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದಾಗಿ ಆಗಸ್ಟ್ 15ರಂದು ಕೆಂಪುಕೋಟೆ ಮೇಲೆ ಮಾತನಾಡಿದ್ದ ಮೋದಿ, ಪ್ರತಿಯೊಬ್ಬ ಸಂಸದನು ಆದರ್ಶ ಗ್ರಾಮ ಯೋಜನೆಯಡಿ ಒಂದು ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕು ಎಂದು ಸಂಸದರಿಗೆ ಸೂಚಿಸಿದ್ದರು.