ನವದೆಹಲಿ: ಬಿಜೆಪಿ-ಶಿವಸೇನೆ ಸೀಟು ಹಂಚಿಕೆಯ ಕುರಿತಾಗಿ ಮೂಡಿರುವ ಸಮಸ್ಯೆಗಳು ಶೀಘ್ರದಲ್ಲಿಯೇ ಬಗೆಹರಿಯುವುದೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸಚಿವ ಸಂಪುಟ ಸೀಟು ಹಂಚಿಕೆ ವಿಚಾರವಾಗಿ ಬಿಜೆಪಿ-ಶಿವಸೇನೆಯಲ್ಲಿ ಮೂಡಿರುವ ಅಸಮಾಧಾನದ ಕುರಿತಾಗಿ ಪ್ರತಿಕ್ರಿಯಿಸಿರುವ ಅರುಣ್ ಜೇಟ್ಲಿ, ಬಿಜೆಪಿ-ಶಿವಸೇನೆ ಪಕ್ಷಗಳಲ್ಲಿ ಹಲವು ದಿನಗಳಿಂದ ಸಮಸ್ಯೆಗಳು ಉಂಟಾಗಿದ್ದು, ಕೆಲವು ಸಮಸ್ಯೆಗಳನ್ನು ಅವರವರೇ ಇತ್ಯರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
ಸೀಟು ಹಂಚಿಕೆ ಹಂಚಿಕೆ ಕುರಿತಾಗಿ ಅಸಮಾಧಾನ ಹೊಂದಿದ್ದ ಶಿವಸೇನೆ, ಭಾನುವಾರ ಸಚಿವ ಸಂಪುಟ ಸಮಾರಂಭದಲ್ಲಿ ಶಿವಸೇನೆಯ ಯಾರೊಬ್ಬ ಮುಖಂಡನೂ ಪಾಲ್ಗೊಳ್ಳದಿರುವಂತೆ ತಿಳಿಸಿತ್ತು. ಎನ್‌ಸಿಪಿಯೊಂದಿಗೆ ನಿಮ್ಮ ಸಂಬಂಧ ತೃಪ್ತಿಕರವಾಗಿಲ್ಲ. ಮಹಾರಾಷ್ಟ್ರದಲ್ಲಿ ನೀವು ಮೈತ್ರಿ ಕುರಿತಂತೆ ಯಾವ ನಿರ್ಧಾರ ಕೈಗೊಳ್ಳುತ್ತೀರಾ? ಎಂಬುದನ್ನು ಮೊದಲು ಸ್ಪಷಪಡಿಸಿ, ಇಲ್ಲದಿದ್ದರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಎಂಬ ಎಚ್ಚರಿಕೆಯನ್ನು ಶಿವಸೇನೆ ಬಿಜೆಪಿಗೆ ನೀಡಿತ್ತು.
ಮೂಲಗಳ ಪ್ರಕಾರ ಶಿವಸೇನೆ ಸಚಿವ ಸಂಪುಟ ಹಂಚಿಕೆಗೂ ಮೊದಲೇ ಕ್ಯಾಬಿನೆಟ್ ದರ್ಜೆಯಲ್ಲಿ ತಮ್ಮ ಪಕ್ಷದ ಮುಖಂಡರಿಗೆ 5 ಸ್ಥಾನ, ರಾಜ್ಯ ಸಚಿವ ಸ್ಥಾನದಲ್ಲಿ ಬಿಜೆಪಿಯಂತೆ ಸಮ ಸ್ಥಾನ ಹಾಗೂ ಉಪ ಮುಖ್ಯಮಂತ್ರಿ ಅಥವಾ ಗೃಹ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಬೇಡಿಕೆ ಇಟ್ಟಿತ್ತು ಎಂದು ತಿಳಿದು ಬಂದಿದೆ.