ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಸಿಬಿಐ ಯು-ಟರ್ನ್ ಹೊಡೆದಿದೆ. ಈವರೆಗೆ ಏನೋ ಹೇಳುತ್ತಿದ್ದ ಸಿಬಿಐ ಈಗ ತನ್ನ ಹೇಳಿಕೆಯನ್ನೇ ಬದಲಾಯಿಸಿದೆ.
ಕೈಗಾರಿಕೋದ್ಯಮಿ ಕುಮಾರ ಮಂಗಲಂ ಬಿರ್ಲಾ, ಕಲ್ಲಿದ್ದಲು ಮಾಜಿ ಕಾರ್ಯದರ್ಶಿ ಪಿ.ಸಿ ಪಾರಖ್ ಮತ್ತು ಇತರರ ವಿರುದ್ಧದ ಆರೋಪವನ್ನು ಅಲ್ಲಗಳೆದು, ಸಮಾಪ್ತಿ ವರದಿ ಸಲ್ಲಿಸಿದ್ದ ಸಿಬಿಐ ಈಗ ಈ ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎನ್ನುವ ಮೂಲಕ ಎಲ್ಲರನ್ನೂ ಅಚ್ಚರಿಗೆ ನೂಕಿದೆ.
ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ವಿಶೇಷ ಸರ್ಕಾರಿ ವಕೀಲ ಆರ್, ಎಸ್, ಚೀಮಾ ಅವರು ಸೋಮವಾರ ಸಿಬಿಐ ವಿಶೇಷ ನ್ಯಾಯಾಧೀಶರ ಮುಂದೆ ಹಾಜರಾಗಿ, ಅ. 21ರಂದು ಸಿಬಿಐ ಸಲ್ಲಿಸಿದ್ದ ಸಮಾಪ್ತಿ ವರದಿಯನ್ನು ಮತ್ತೆ ಪರಿಗಣನೆಗೆ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಹಗರಣದಲ್ಲಿ ಖಾಸಗಿ ವ್ಯಕ್ತಿಗಳು ಮತ್ತು ಕೆಲವು ಸರ್ಕಾರಿ ಅಧಿಕಾರಿಗಳು ಪಾಲ್ಗೊಂಡಿರುವ ಬಗ್ಗೆ ಸಾಕ್ಷ್ಯಗಳಿವೆ. ಹಾಗಾಗಿ ಅವರ ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಬಹುದು ಎಂದು ಚೀಮಾ ಹೇಳಿದ್ದಾರೆ. ಜತೆಗೆ ಪ್ರಕರಣಕ್ಕೆ ಸಂಬಂಧಸಿದ ಕೆಲವು ದಾಖಲೆಗಳನ್ನೂ ನ್ಯಾಯಾಲಯಕ್ಕೆ ಒದಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸಮಾಪ್ತಿ ವರದಿಯ ಪರಿಶೀಲನೆಯ ದಿನಾಂಯವನ್ನು ನ. 25ಕ್ಕೆ ನಿಗದಿ ಮಾಡಿದೆ.