ದೇಶ

ನಾಡಗೀತೆ ಸಂಕ್ಷಿಪ್ತ ಮಾಡದಿದ್ರೆ ಪ್ರತಿಭಟನೆ: ಚಿಮೂ ಎಚ್ಚರಿಕೆ

ಬೆಂಗಳೂರು: ರಾಜ್ಯ ಸರ್ಕಾರ ತಕ್ಷಣವೇ 'ಜಯ ಭಾರತ ಜನನಿಯ ತನುಜಾತೆ' ನಾಡಗೀತೆಯನ್ನು ಸಂಕ್ಷಿಪ್ತ ಮಾಡದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಎಚ್ಚರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಜನಶಕ್ತಿ ಕೇಂದ್ರ ಸೋಮವಾರ ಆಯೋಜಿಸಿದ್ದ ಕಾರ್ಯಕ್ರದಲ್ಲಿ ವೆ.ಶ್ರೀನಿವಾಸ್ ಅಭಿನಂದನಾ ಗ್ರಂಥ 'ಕನ್ನಡ ಚಿಲುಮೆ' ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ರವೀಂದ್ರನಾಥ ಠಾಕೂರ್ ಬರೆದ 'ಜನಗಣ ಮನ ಅಧಿನಾಯಕ ಜಯ ಹೇ' ಹಾಗೂ ಬಂಕಿಮ್ ಚಂದ್ರ ಚಟರ್ಜಿ ರಚಿಸಿದ 'ವಂದೇ ಮಾತರಂ' ಗೀತೆಗಳ ಸಂಕ್ಷಿಪ್ತ ರೂಪವನ್ನೇ ರಾಷ್ಟ್ರಗೀತೆಗಳಾಗಿ ಹಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ನಾಡಗೀತೆಯ ಸಂಕ್ಷಿಪ್ತೀಕರಣ ಅಗತ್ಯವಿದೆ ಎಂದರು.

ನಾಡಗೀತೆಯ ಮೂಲ ಪಾಠವನ್ನು ಬಿಡುವ ಅಗತ್ಯವಿಲ್ಲ. ಆದರೆ ಅಷ್ಟು ಸುದೀರ್ಘ ಗೀತೆಯನ್ನು ಕಂಠಪಾಠ ಮಾಡಲು ಸಾಧ್ಯವಿಲ್ಲ. ಹಾಗಾಗಿ ನೆನಪಿನಲ್ಲಿ ಉಳಿಯುವಷ್ಟು ಸಾಲುಗಳನ್ನು ಉಳಿಸಿಕೊಂಡು ಸಂಕ್ಷಿಪ್ತ ಮಾಡಿದರೆ ಎಲ್ಲ ಕನ್ನಡಿಗರ ನಾಲಿಗೆಯಲ್ಲಿ ಹರಿದಾಡಲು ಸಾಧ್ಯ ಎಂಬ ಆಶಯ ವ್ಯಕ್ತಪಡಿಸಿದರು. ನಾಡಗೀತೆಯನ್ನು ಸಂಕ್ಷಿಪ್ತಗೊಳಿಸಲು ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ ನೇತೃತ್ವದ ಸಮಿತಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ತಾವು ಸರ್ಕಾರಕ್ಕೆ ಮನವಿ, ಒತ್ತಡ ಹಾಕಿದರೂ ಪರಿಗಣಿಸಿಲ್ಲ ಎಂದು ಟೀಕಿಸಿದರು.

ಕರ್ನಾಟಕದ ಏಕೀಕರಣವಾದರೂ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಎಂದು ಕನ್ನಡಿಗರಾದ ನಾವೇ ಕರೆಯುತ್ತಿರುವುದು ನಾಚಿಕೆ ಗೇಡಿನ ಸಂಗತಿ. ಇದರಿಂದ ಎಂಇಎಸ್‌ಗೆ ನಾವೇ ಕುಮ್ಮಕ್ಕು ಕೊಟ್ಟಂತೆ ಆಗುತ್ತಿದೆ. ಈ ರೀತಿ ಕರೆಯುವುದನ್ನು ಬಿಡಬೇಕು. ಈ ಬಗ್ಗೆಯೂ ಸರ್ಕಾರ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬೇಕಿದ್ದರೆ ಮುಂಬೈ ಕರ್ನಾಟಕದ ಬದಲು ಕಿತ್ತೂರು ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಬದಲು ಕಲ್ಯಾಣ ಕರ್ನಾಟಕ ಎಂದು ಕರೆಯಲಿ.

ನಮ್ಮ ಈ ಎಲ್ಲ ಒತ್ತಾಯಗಳಿಗೆ ರಾಜ್ಯ ಸರ್ಕಾರ ಒಪ್ಪಿ ಕೆಲಸ ಮಾಡದಿದ್ದರೆ ನಾವೆಲ್ಲರೂ ಸೇರಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡ ಕಟ್ಟಿ ಬೆಳೆಸುವಿಕೆಯಲ್ಲಿ ಕುವೆಂಪು, ಅನಕೃ, ಚಿದಾನಂದಮೂರ್ತಿ ಎಂಬ ಮೂರು ಮಾದರಿಗಳನ್ನು ನಾನು ಗುರುತಿಸಿದ್ದೇನೆ. ಕುವೆಂಪು ಬರವಣಿಗೆಯಲ್ಲಿ, ಅನಕೃ ಚಳವಳಿಯಲ್ಲಿ, ಚಿಮೂ ಹೋರಾಟ ಮುಖೇನ ಕನ್ನಡ ಕಟ್ಟಿ ಬೆಳೆಸಿದ್ದಾರೆ ಎಂದು ಪ್ರಸಿದ್ಧ ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

ಇತ್ತೀಚೆಗೆ ನಮ್ಮನ್ನಗಲಿದ ವೆ.ಶ್ರೀನಿವಾಸ್ ರಾಜಕೀಯ, ಅಧಿಕಾರದ ಆಸೆ ಹಿಂದೆ ಹೋಗದೆ ಕನ್ನಡದ ಅಪ್ರತಿಮ ಚಳವಳಿಗಾರರಾಗಿ ಉಳಿದವರು. ಅವರ ಕಡೆಯ ಆಸೆಯಂತೆ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ತಿಳಿಸಿದರು.

ವೆ.ಶ್ರೀನಿವಾಸ್ ಪತ್ನಿ ನಿರ್ಮಲ, ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸದ್ಭಾವನಾ ಪ್ರತಿಷ್ಠಾನದ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ಜನಶಕ್ತಿ ಕೇಂದ್ರದ ಕಾರ್ಯದರ್ಶಿ ಪುಟ್ಟರಾಜು ಉಪಸ್ಥಿತರಿದ್ದರು.

SCROLL FOR NEXT