ಆಲಿಗಡ/ ಜಮ್ಮು: ವಿದ್ಯಾರ್ಥಿನಿಯರಿಗೆ ಗ್ರಂಥಾಲಯಕ್ಕೆ ಪ್ರವೇಳ ನೀಡಿದರೆ ಅವರ ಹಿಂದೆ ನಾಲ್ಕು ಪಟ್ಟು ಹುಡುಗರ ಹಿಂಡು ದಾಂಗುಡಿಯಿಡುತ್ತದೆ!
ದೇಶದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವ ಆಲಿಗಡ ಮುಸ್ಲಿಂ ವಿವಿಯ ಮೌಲಾಮಾ ಆಜಾದ್ ಗ್ರಂಥಾಲಯಕ್ಕೆ ವಿದ್ಯಾರ್ಥಿನಿಯರ ಪ್ರವೇಶ ನಿರ್ಬಂಧಿಸುವ ನಿಯಮವನ್ನು ಬೆಂಬಲಿಸಿ ಕುಲಪತಿ ಲೆ. ಜ. ಜಮೀರುದ್ದೀನ್ ಷಾ ನೀಡಿದ ಹೇಳಿಕೆ ಇದು. ಕುಲಪತಿ ಈ ಹೇಳಿಕೆ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಕುಲಪತಿ ಹೇಳಿದ್ದೇನು?: ಗ್ರಂಥಾಲಯದಲ್ಲಿ ಈಗಾಗಲೇ ಜಾಗದಜ ಸಮಸ್ಯೆಯಿದೆ. ಅಲ್ಲಿ ಹುಡುಗರಿಗೂ ಕೂರಲು ಜಾಗ ಇಲ್ಲ . ಒಂದು ವೇಳೆ ವಿದ್ಯಾರ್ಥಿನಿಯರು ಗ್ರಂಥಾಲಯದಲ್ಲಿ ಕಾಣಿಸಿಕೊಂಡರೆ ನಾಲ್ಕು ಪಟ್ಟು ಹೆಚ್ಚು ಹುಡುಗರು ಬರುತ್ತಾರೆ. ಇದರಿಂದ ಜಾಗದ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ತಪ್ಪು ಅರ್ಥೈಕೆ
ತಮ್ಮ ಹೇಳಿಕೆ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಕುಲಪತಿ ಜಮೀರ್ ಅವರು ಸ್ಪಷ್ಟನೆ ನೀಡಿದ್ದಾರೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಗ್ರಂಥಾಲಯದಲ್ಲಿ ಒಂದೇ ಒಂದು ಸ್ಥಾನ ಖಾಲಿ ಇಲ್ಲ ಎಂದಷ್ಟೇ ನಾನು ಹೇಳಿದ್ದೆ. ಗ್ರಂಥಾಲಯವು ಕಾಲೇಜಿನಿಂದ ಸಾಕಷ್ಟು ದೂರದಲ್ಲಿದೆ. ಹಾಗಾಗಿ ಸರಗಳ್ಳರಿಂದಾಗಿ ಅವರ ಸುರಕ್ಷತೆಯೂ ನಮಗೆ ಸವಾಲು. ಜತೆಗೆ , ಎಲ್ಲ ಪುಸ್ತಕಗಳು ಆನ್‌ಲೈನ್‌ನಲ್ಲೇ ಲಭ್ಯ ಇವೆ. ನಾವೇನು ಮಹಿಳೆಯರ ವಿರೋಧಿಗಳಲ್ಲ.
ಮಾನವ ಹಕ್ಕುಗಳ ಉಲ್ಲಂಘನೆ
ವಿವಿಯ ವಿಚಿತ್ರ ನಿಯಮ ಮತ್ತು ಕುಲಪತಿ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವೆ ಸ್ಮೃತಿ ಇರಾನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ನಮ್ಮ ಹೆಣ್ಣುಮಕ್ಕಳಿಗೆ ಮಾಡುವ ಅವಮಾನ ಎಂದು ಹೇಳಿದ್ದಾರೆ. ಜತಗೆಸ ಸ್ಮೃತಿ ಇರಾನಿ ಈ ಕುರಿತು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅವರಿಂದ ವರದಿಯನ್ನೂ ಕೇಳಿದ್ದಾರೆ. ಈ ನಡುವೆ, ಗ್ರಂಥಾಲಯದಿಂದ ವಿದ್ಯಾರ್ಥಿನಿಯರನ್ನು ದೂರ ಇಟ್ಟರೆ ಮಾನವ ಹಕ್ಕುಗಳ ಉಲ್ಲಂಘಿಸಿದಂತಾಗುತ್ತದೆ ಎಂದು ಕುಲಪತಿಯವರಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಎಚ್ಚರಿಸಿದೆ.
ಹೆಣ್ಣು ಮಕ್ಕಳ ವಿವಾಹವೇ ನನ್ನ ಹೊಣೆಗಾರಿಕೆ!
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಈ ಕಾಂಗ್ರೆಸ್ ಅಭ್ಯರ್ಥಿ ಪಾಲಿಗೆ ಮದುವೆ ವಯಸ್ಸಿಗೆ ಬಂದಿರುವ ಹೆಣ್ಣುಮಕ್ಕಳು ಸಾಲದ ಹೊರೆಯಂತೆ! ಅಚ್ಚರಿಯಾದರೂ ನಿಜ. ಗಂಡೇರ್ಬಲ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸುತ್ತಿರುವ ಮಹಮ್ಮದ್ ಯೂಸಫ್ ಭಟ್ ಸಲ್ಲಿಸಿದ ನಾಮಪತ್ರದಲ್ಲಿ ಈ ವಿಚಾರ ತಿಳಿಸಿದ್ದಾರೆ. ಆಸ್ತಿ ವಿವರ ಘೋಷಿಸುವ ನನಗೆ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ. ಅವರು ನನ್ನ ಸಾಲದ ಬಾಧ್ಯತೆ ಎಂದು ಭಟ್ ನಮೂದಿಸಿದ್ದಾರೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ತೀವ್ರ ಟೀಕೆಗೆ ಗುರಿಯಾಗಿದೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರು ಹೆಣ್ಣು ಮಕ್ಕಳನ್ನು ಸಾಲದ ಬಾಧ್ಯತೆಯಾಗಿ ನೋಡುವ ಕುರಿತು ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಭಟ್, ತಾನೊಬ್ಬ ಅನಕ್ಷರಸ್ಥ. ಸಹಾಯಕನ ನೆರವಿನಿಂದ ನಾಮಪತ್ರ ಭರ್ತಿ ಮಾಡುವ ವೇಳೆ ಈ ಎಡವಟ್ಟು ಆಗಿದೆ. ನನ್ನ ಹೇಳಿಕೆಯನ್ನು ಆತ ತಪ್ಪಾಗಿ ಅರ್ಥೈಸಿಕೊಂಡು ಈ ರೀತಿ ನಮೂದಿಸಿದ್ದಾನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿವಿ ಕುಲಪತಿ ಅವರದು ಆಘಾತಕಾರಿ ಹೇಳಿಕೆ. ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ. ಈ ಕುರಿತು ನಾನು ಉನ್ನತ ಶಿಕ್ಷಣ ಕಾರ್ಯದರ್ಶಿ ಅವರಿಂದ ವರದಿ ಕೇಳಿದ್ದೇನೆ.
-ಸ್ಮೃತಿ ಇರಾನಿ, ಕೇಂದ್ರ ಸಚಿವೆ