ದೇಶ

ಚಿಟ್‌ಫಂಡ್ ಹಗರಣ: ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಸಂಸದ ಕುನಾಲ್

Vishwanath S

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಪ್ರಭಾವಿಗಳನ್ನು ಬಂಧಿಸುತ್ತಿಲ್ಲ ಎಂಬ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ ಸಂಸದ ಕುನಾಲ್ ಘೋಷ್ ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪಕ್ಷಪಾತ ಮಾಡುತ್ತಿದೆ. ಚಿಟ್‌ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಕೆಲ ಪ್ರಭಾವಿಗಳನ್ನು ಬಂಧಿಸುವಲ್ಲಿ ಸಿಬಿಐ ಮೀನಮೇಷ ಎಣಿಸುತ್ತಿದೆ ಎಂಬ ಆರೋಪ ಮಾಡಿರುವ ಕುನಾಲ್ ಘೋಷ್ ಇಂದು ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು, ಜೈಲಿನ ಅಧಿಕಾರಿಗಳು ಅವರನ್ನು ಕೂಡಲೇ ಕೊಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿಟ್‌ಫಂಡ್ ಹಗರಣ ಸಂಬಂಧ ಕಳೆದ ಒಂದು ವರ್ಷದಿಂದ ಜೈಲಿನಲ್ಲಿರುವ ಕುನಾಲ್ ಘೋಷ್, ಸಿಬಿಐ ತನಿಖೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ. ಹೀಗಾಗಿ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿತರ ಪ್ರಭಾವಿ ಆರೋಪಿಗಳ ವಿರುದ್ಧ ಸೂಕ್ತ ತನಿಖೆಯಾಗುತ್ತಿಲ್ಲ ಎಂದು ಆರೋಪಿಸಿದ್ದ ಅವರು, ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದರು. ಅದರಂತೆ ಇಂದು ಬೆಳಗ್ಗೆ ಆತ್ಮಹತ್ಯೆ ಯತ್ನಿಸಿದ್ದಾರೆ.

ಶಾರದ ಗ್ರೂಪ್ ಚಿಟ್‌ಫಂಡ್ ಕಂಪನಿ ಪಶ್ಟಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನಲ್ಲಿ ಲಕ್ಷಾಂತರ ಜನರಿಗೆ ಸುಮಾರು 25 ಸಾವಿರ ಕೋಟಿ ರು. ವಂಚನೆ ಮಾಡಿತ್ತು. ಈ ಹಗರಣದಲ್ಲಿ ಅನೇಕ ರಾಜಕೀಯ ಪ್ರತಿನಿಧಿಗಳ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತ್ತು.

SCROLL FOR NEXT