ಕೋಲ್ಕತಾ: ಶಾರದಾ ಹಗರಣದಲ್ಲಿ ನಿಜವಾಗಿ ಭಾಗಿಯಾಗಿರುವ ಆರೋಪಿಗಳು ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ ಅವರನ್ನು ಕೂಡಲೇ ಬಂಧಿಸುವಂತೆ ಕುನಾಲ್ ಘೋಷ್ ಆಗ್ರಹಿಸಿದ್ದಾರೆ.
ಶಾರದಾ ಚಿಟ್ ಘಂಡ್ ಹಗರಣದಲ್ಲಿ ಭಾಗಿಯಾಗಿ ಬಂಧನದಲ್ಲಿದ್ದ ಘೋಷ್ ಜೈಲಿನಲ್ಲೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘೋಷ್ ಅವರನ್ನು ಆಸ್ಪತ್ರೆಯ ಸಿಬ್ಬಂದಿಗಳು ನರ ವಿಜ್ಞಾನ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಘೋಷ್ ಹಗರಣದಲ್ಲಿ ಭಾಗಿರುವವರ ಹೆಸರನ್ನು ತನಿಖೆ ವೇಳೆ ಅಧಿಕಾರಿಗಳಿಗೆ ಹೇಳಲಾಗಿದ್ದು, ಭಾಗಿಯಾಗಿರುವ ಆರೋಪಿಗಳು ಈಗಲೂ ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ ಅವರನ್ನು ಶೀಘ್ರದಲ್ಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಶಾರದಾ ಚಿಟ್ಸ್ ಫಂಡ್ ಹಗರಣದಲ್ಲಿ ಘೋಷ್ ಅವರನ್ನು ಮೊದಲು ಪಶ್ಚಿಮ ಬಂಗಾಳದ ಪೋಲೀಸರು ಬಂಧಿಸಿದ್ದರು. ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸಿಬಿಐ ವಿಚಾರಣೆ ವೇಳೆ ಘೋಷ್ ಹಗರಣದಲ್ಲಿ ಭಾಗಿಯಾಗಿರುವವರ ಹೆಸರನ್ನು ತನಿಖಾಧಿಕಾರಿಗಳಿಗೆ ತಿಳಿಸಿ ಇನ್ನು ಮೂರು ದಿನಗಳೊಳಗೆ ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದರಲ್ಲದೇ, ಅವರನ್ನು ಬಂಧಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಎಚ್ಚರಿಸಿದ್ದರು. ಹೇಳಿಕೆಯಂತೆ ನ.14 ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಘೋಷ್ ಜೈಲಿನಲ್ಲೇ ಸುಮಾರು 58 ನಿದ್ರೆ ಮಾತ್ರೆಗಳನ್ನು ಸೇವಿಸಿದ್ದರು. ತಕ್ಷಣ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.