ದೇಶ

ಅಕ್ರಮವನ್ನೇ ಎಸಗಿಲ್ಲ, ರಾಜಿನಾಮೆ ಏಕೆ ನೀಡಲಿ?

ಬೆಂಗಳೂರು: ನಾನು ಹಾಗೂ ನನ್ನ ಕುಟುಂಬ  ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಮಾಜ ಪರಿವರ್ತನಾ ಸಂಸ್ಥೆಯ ಮುಖ್ಯಸ್ಥ ಎಸ್.ಆರ್. ಹೀರೇಮಠ ಅವರ ಆರೋಪ, ಲೋಕಾಯುಕ್ತ ಸಂಸ್ಥೆಗೆ ಸಲ್ಲಿಕೆಯಾದ ವರದಿ ಹಿನ್ನೆಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನ ವಿರುದ್ಧ ಏಕವಚನ ಬಳಸಿ ಕ್ರಿಮಿನಲ್ ಎಂದು ಆರೋಪಿಸಿರುವ ಹಿರೇಮಠ್ ಅನಾಗರಿಕರಂತೆ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವನಹಳ್ಳಿ ಸಮೀಪದ  ನವರತ್ನ ಅಗ್ರಹಾರದ ಸರ್ವೆ ನಂ 13 ಮತ್ತು 3ರಲ್ಲಿರುವ ಜಮೀನನ್ನು 1983ರಲ್ಲಿ ತಂದೆ ಗುಂಡೂರಾವ್ ಖರೀದಿಸಿದ್ದರು. 1993ರಲ್ಲಿ ಅವರು ಮೃತಪಟ್ಟಿ ನಂತರ, 1995ರಲ್ಲಿ ನಾನು ಹಾಗೂ ನನ್ನಿಬ್ಬರು ಸಹೋದರರ ಹೆಸರಿಗೆ ಇದು ವರ್ಗಾವಣೆಯಾಗಿದೆ. ಆದರೆ 2009ರಲ್ಲಿ ಬೆಂಗಳೂರು ಉತ್ತರ ತಹಶೀಲ್ದಾರ್ ಕಚೇರಿಯಿಂದ ಬಂದ ಪತ್ರದಲ್ಲಿ ಸರ್ವೆ ನಂ.3ರಲ್ಲಿ 2.14 ಎಕರೆ ಸರ್ಕಾರಿ ಜಮೀನು ನಿಮ್ಮ ಸ್ವಾಧೀನದಲ್ಲಿ ಇದೆ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ನಾನು ಸರ್ವೆ ನಡೆಸಿ ಜಮೀನಿನ ಪೋಡಿಗೆ ಮನವಿ ಮಾಡಿದ್ದೆ. ಒಂದೊಮ್ಮೆ ಖರೀದಿ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಭೂಮಿ ಬಂದಿದ್ದರೆ ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಲಿ ಎಂದು ಹೇಳಿದ್ದೆ ಎಂದು ವಿವರಿಸಿದರು.

ಈ ಮಧ್ಯೆ ಎ.ಟಿ.ರಾಮಸ್ವಾಮಿ ಅವರು ಸಲ್ಲಿಸಿದ ವರದಿಯಲ್ಲಿ ನವರತ್ನ ಅಗ್ರಹಾರದ ಸರ್ವೆ ನಂಬರ್ 13ರಲ್ಲಿನ 56 ಎಕರೆ ಜಾಗವೂ ಸರ್ಕಾರಿ ಗೋಮಾಳ ಎಂದು ಉಲ್ಲೇಖಿಸಿದ್ದರು. ಹೀಗಾಗೀ ನಾವು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕ್ರಯಪತ್ರದ ವಿವರಣೆ ಸಲ್ಲಿಸಿದ್ದೆವು. ದಾಖಲೆ ಪತ್ರ ಪರಿಶೀಲಿಸಿ 2012ರಲ್ಲಿ ಜಿಲ್ಲಾಧಿಕಾರಿಗಳು ಈ ಜಮೀನಿಗೆ ಕೆ.ನಾಗರಾಜು ಎಂಬುವರು ಮೂಲ ಹಕ್ಕುದಾರರು ಎಂದು ವರದಿ ನೀಡಿದ್ದರು.ಇದರಿಂದ ಎ.ಟಿ.ರಾಮಸ್ವಾಮಿ ವರದಿಯಲ್ಲಿ ಈ ಜಾಗವನ್ನು ಗೋಮಾಳ ಎಂದು ಪರಿಗಣಿಸಿದ್ದು ತಪ್ಪು ಎಂದು ಸಾಬೀತಾಗಿದೆ ಎಂದರು.

ಜುಲೈನಲ್ಲಿ ಪ್ರಕರಣ ತಾರ್ಕಿಖ ಅಂತ್ಯಕ್ಕೆ ಬಂದಿದ್ದು, ಕಂದಾಯ ಇಲಾಖೆ 10 ಎಕರೆ ಹೆಚ್ಚುವರಿಯಾಗಿ ಸೇರಿದೆ ಎಂದು ಹೇಳಿದೆ. ನಮ್ಮ ಜಾಗ ಸರ್ವೆ ಮಾಡಿ ಹೆಚ್ಚುವರಿ ಜಾಗವಿದ್ದರೆ ವಶಪಡಿಸಿಕೊಂಡು ಪೋಡಿ ಮಾಡಿಕೊಡಿ ಎಂದು ನಾನೇ ಪದೇ ಪದೆ ಹೇಳುತ್ತಿದ್ದೇನೆ. ಹೀಗಾಗಿ ನನ್ನನ್ನು ಮತ್ತು ನನ್ನ ಕುಟುಂಬ ವರ್ಗದವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದೇಕೆ ಎಂದು ಪ್ರಶ್ನಿಸಿದರು.

ಲೋಕಾಯುಕ್ತಕ್ಕೆ ಸಲ್ಲಿಕೆಯಾದ ವರದಿಯಲ್ಲಿ ಯಾವಾಗ ಒತ್ತುವರಿಯಾಗಿದೆ ಎಂಬ ನಿಖರ ಮಾಹಿತಿ ಇಲ್ಲ ಎಂದಿದ್ದಾರೆ. ಸರಿಯಾಗಿ ದಾಖಲೆ ಪರಿಶೀಲನೆ ನಡೆಸದೇ ನನ್ನ ತೇಜೋವಧೆ ಮಾಡಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹಿರೇಮಠ್‌ಗೆ ಕೆಲಸವಿಲ್ಲ
ನನ್ನ ರಾಜಿನಾಮೆಗೆ ಆಗ್ರಹಿಸುತ್ತಿರುವ ಎಸ್.ಆರ್.ಹಿರೇಮಠ್ ಅವರಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

SCROLL FOR NEXT