ನಾಗ್ಪುರ: ಶಿವಸೇನೆಗೆ ಈಗಲೂ ಬಿಜೆಪಿ ಪಕ್ಷದ ಬಾಗಿಲು ತೆರೆದಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಿನ್ನೆ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಫಡ್ನವೀಸ್ ಸಂಪುಟ ವಿಸ್ತರಣೆ ಮುಂದಿನ ವಾರ ನಡೆಯಲಿದ್ದು ಬಿಜೆಪಿಯೊಂದಿಗೆ ಶಿವಸೇನೆ ಮಾತುಕತೆ ನಡೆಸಲು ಈಗಲೂ ಪಕ್ಷದ ಬಾಗಿಲು ತೆರೆದಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಹಾಗೂ ಶಿವಸೇನೆ ನಡುವೆ ಮಾತುಕತೆ ನಡೆಸುವ ಸಲುವಾಗಿ ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿರುವ ಫಡ್ನವೀಸ್, ಈ ವಿಷಯದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಎನನ್ನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಂದೆ ಉಂಟಾಗುವ ಬರಗಾಲ ಪರಿಸ್ಥಿತಿ ಬಗ್ಗೆ ಮಾತನಾಡಿದ ಅವರು, ಬರಗಾಲವನ್ನು ಎದುರಿಸುವ ಸಲುವಾಗಿ ಈಗಾಗಲೇ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳಿಗೆ ಸಿದ್ಧತೆಗಳನ್ನು ನಡೆಸಲಾಗುವುದು ಎಂದಿದ್ದಾರೆ.