ನವದೆಹಲಿ: ಕರ್ನಾಟಕದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಖ್ಯಾತಿ ಪಡೆದಿರುವ ಸಿಬಿಐ ಹೆಚ್ಚುವರಿ ನಿರ್ದೇಶಕ ಆರ್‌ಕೆ ದತ್ತಾ ಅವರಿಗೆ 2 ಸ್ಪೆಕ್ಟ್ರಂ ಹಗರಣದ ತನಿಖೆಯ ಹೊಣೆ ವಹಿಸಲಾಗಿದೆ. ಇವರು 1981ರ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ.
ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರಿಗೆ 2ಜಿ ತನಿಖೆಯಿಂದ ಹೊರಬರುವಂತೆ ಸುಪ್ರೀಂಕೋರ್ಟ್ ಆದೇಶಿಸಿದ ಹಿನ್ನಲೆಯಲ್ಲಿ ಶುಕ್ರವಾರ ರೂಪಕ್ ಕುಮಾರ್ ದತ್ತಾ ಅವರ ಮೇಲೆ ತನಿಖೆ ಹೊಣೆ ವಹಿಸಲಾಯಿತು. 2ಜಿ ಕೇಸನ್ನು ತನಿಖೆ ಮಾಡುತ್ತಿರುವ ಸಿಬಿಐನ ಉಗ್ರ ನಿಗ್ರಹ ಪಡೆ (ಎಸಿಬಿ)ಯ ಒಟ್ಟಾರೆ ಉಸ್ತುವಾರಿಯೂ ದತ್ತಾ ಮೇಲಿದೆ.
ತನಿಖೆಯ ಹಿರಿಯ ಅಧಿಕಾರಿಯಾದ ಸಿಬಿಐ ವಿಶೇಷ ನಿರ್ದೇಶಕ ಅನಿಲ್ ಸಿನ್ಹಾ ಅವರಿಗೆ ಸಿಗುತ್ತದೋ ಅಥವಾ ಎಸಿಬಿ ನೇತೃತ್ವ ವಹಿಸಿರುವ ದತ್ತಾ ಅವರಿಗೆ ಸಿಗುತ್ತದೋ ಎಂಬ ಗೊಂದಲ ನಿರ್ಮಾಣವಾಗಿತ್ತು. ಆದರೆ ಸುಪ್ರೀಂಕೋರ್ಟ್ ಆದೇಶದನ್ವಯ, 2ಜಿ ತನಿಖೆಯ ಭಾಗವಾಗಿರುತ್ತಾರೋ ಅವರಿಗೇ ತನಿಖೆಯ ಹೊಣೆ ವಹಿಸಬೇಕಿತ್ತು. ಹಾಗಾಗಿ ಆರ್‌ಕೆ ದತ್ತಾ ಅವರ ಹೆಗಲಿಗೆ ತನಿಖೆಯ ಸಂಪೂರ್ಣ ಹೊಣೆ ಬಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ.
ಯಾರೀ ದತ್ತಾ?
ರೂಪಕ್ ಕುಮಾರ್ ದತ್ತಾ ಸದ್ಯ ಸಿಬಿಐನ ಹೆಚ್ಚುವರಿ ನಿರ್ದೇಶಕ. 1981ರ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ. ಊರು ಉತ್ತರ ಪ್ರದೇಶ.
ಕಲಿತಿದ್ದೆಲ್ಲಿ?
ಐಐಟಿ ಕಾನ್ಪುರದಲ್ಲಿ ಬಿಟೆಕ್, ಆಸ್ಟ್ರೇಲಿಯಾ ಸ್ಪಿನ್‌ಬರ್ನ್ ವಿವಿಯಲ್ಲಿ ಎಂಬಿಎ
ಸಿಬಿಐನಲ್ಲಿ ಸೇವೆ ಸಲ್ಲಿಸಿದ್ದಾರೆ?
1988ರಿಂದ ಉಗ್ರ ನಿಗ್ರಹ ತರಬೇತಿ, ಎಂಡಿಎಂಎ ಸೇರಿದಂತೆ ಸಿಬಿಐನ ಹಲವು ವಿಭಾಗಗಳಲ್ಲಿ ಸೇವೆ, ಜಂಟಿ ನಿರ್ದೇಶಕ, ಡಿಐಜಿ, ಎಸ್ಪಿಯಾಗಿಯೂ ಕಾರ್ಯ, ಪ್ರಮುಖ ಪ್ರಕರಣಗಳ ತನಿಖೆಯಲ್ಲಿಯೂ ಭಾಗಿ.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದರೇ?
ಕರ್ನಾಟಕ ಲೋಕಾಯುಕ್ತದಲ್ಲಿ ಎಡಿಜಿಪಿಯಾಗಿ ಕಾರ್ಯನಿರ್ವಹಣೆ. ಕಾರವಾರ, ದಾವಣಗೆರೆಯಲ್ಲಿ ಎಸ್ಪಿಯಾಗಿ ಗುಪ್ತವಿಚಕ್ಷಣಾದಳದ ಡಿಐಜಿಯಾಗಿ, ಈಶಾನ್ಯ ವಲಯದ ಐಜಿಪಿಯಾಗಿ ಸೇವೆ.
ಗೌರವ?
ಪ್ರಶಂಸನೀಯ ಸೇವೆಗಾಗಿ ಪೊಲೀಸ್ ಮೆಡಲ್, ವಿಶಿಷ್ಟ ಸೇವೆಗಾಗಿ ರಾಶ್ಟ್ರಪತಿಗಳ ಪೊಲೀಸ್ ಮೆಡಲ್ ದೊರೆತಿದೆ.
ಸಿನ್ಹಾ ತೆಗೆದು ಹಾಕಲು ಹೆಚ್ಚಿದ ಒತ್ತಡ
ಸ್ವತಃ ಸುಪ್ರೀಂಕೋರ್ಟ್‌ನಿಂದಲೇ ಛೀಮಾರಿಗೊಳಗಾದ ಬೆನ್ನಲ್ಲೇ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಒತ್ತಾಯ ಕೇಳಿಬರತೊಡಗಿದೆ. ಡಿ.3ರಂದು ಸಿನ್ಹಾ ನಿವೃತ್ತರಾಗಲಿದ್ದಾರೆ. ಆದರೆ ಅದಕ್ಕೂ ಮೊದಲೇ ಅವರನ್ನು ತೆಗೆದುಹಾಕಬೇಕು ಎನ್ನುವುದು ಹಲವರ ಆಗ್ರಹ. ಇದೇ ವೇಳೆ, 2ಜಿ ಹಗರಣ ಸಂಬಂಧ ಸಿನ್ಹಾ ಮೇಲಿರುವ ಆರೋಪಗಳ ಬಗ್ಗೆ ತನಿಖೆ ಕೇಂದ್ರ ಸರ್ಕಾರ ಆದೇಶಿಸುವ ಸಾಧ್ಯತೆ ಇದೆ. ಅವರ ನಡತೆಯ ಬಗ್ಗೆ ವಿವರ ಕೋರಿ ಸದ್ಯದಲ್ಲೇ ಶೋಕಾಸ್ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಿನ್ಹಾ ಕೆಳಗಿಳಿಸುವುದು ಏಕೆ ಸಾಧ್ಯವಿಲ್ಲ?
ರಂಜಿತ್ ಸಿನ್ಹಾರನ್ನು ಸಿಬಿಐ ನಿರ್ದೇಶಕರ ಹುದ್ದೆಯಿಂದ ತೆಗೆದು ಹಾಕುವುದು ಸುಲಭದ ಕೆಲಸವಲ್ಲ. ಏಕೆಂದರೆ ಅದಕ್ಕೆ ಕಾನೂನು ಅಡ್ಡಿಯಾಗುತ್ತದೆ. ಅವರ ಮೇಲೆ ವಿಶ್ವಾಸವಿಲ್ಲ ಎಂದು ಸುಪ್ರೀಂ ಹೇಳಿರುವ ಕಾರಣ, ಅವರನ್ನು ರಜೆಯಲ್ಲಿ ತೆರಳುವಂತೆ ಸಿಬ್ಬಂದಿ ಸಚಿವಾಲಯ ಸೂಚನೆ ನೀಡಬಹುದು. ಆದರೆ ಲೋಕಪಾಲ ಕಾಯ್ದೆ ತಿದ್ದುಪಡಿ ಆಗುವವರೆಗೆ ಸಿಬಿಐಗೆ ಹೊಸ ನಿರ್ದೇಶಕರನ್ನು ನೇಮಕ ಮಾಡಲು ಆಗುವುದಿಲ್ಲ.
ಪ್ರಸ್ತುತ ಲೋಕಪಾಲ ಕಾಯ್ದೆಯ ಪ್ರಕಾರ, ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ಸೇರಿಕೊಂಡೇ ಸಿಬಿಐ ನಿರ್ದೇಶಕರನ್ನು ನೇಮಕ ಮಾಡಬೇಕು. ಆದರೆ ಈಗ ನಮ್ಮಲ್ಲಿ ಪ್ರತಿಪಕ್ಷ ನಾಯಕನೇ ಇಲ್ಲ. ಹಾಗಾಗಿ ಕಾಯ್ದೆಗೆ ತಿದ್ದುಪಡಿ ತರಲೇಬೇಕು. ಚಳಿಗಾಲದ ಅಧಿವೇಶನದಲ್ಲಿ ಮೊದಲ ವಾರದಲ್ಲೇ ಕೇಂದ್ರ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿ ತರುವ ಸಾಧ್ಯತೆ ಇದೆ. ಈ ಎಲ್ಲ ಕಾರಣಗಳಿಂದಾಗಿ ಸಿನ್ಹಾರನ್ನು ಕೂಡಲೇ ತೆಗೆದುಹಾಕಲು ಸಾಧ್ಯವಿಲ್ಲ.