ದೇಶ

ಮಂಗಳಯಾನ '2014ರ ಅತ್ಯುತ್ತಮ ಆವಿಷ್ಕಾರ'

Srinivasamurthy VN

ನ್ಯೂಯಾರ್ಕ್: ಖ್ಯಾತ ಮ್ಯಾಗಜಿನ್ ಟೈಮ್ಸ್‌ನಲ್ಲಿ ಭಾರತದ ಮಂಗಳಯಾನ ಯೋಜನೆ ಕುರಿತು ವಿಶೇಷ ಶ್ಲಾಘನೆ ವ್ಯಕ್ತವಾಗಿದ್ದು, ಮಂಗಳಯಾನ ಯೋಜನೆ '2014ರ ಅತ್ಯುತ್ತಮ ಆವಿಷ್ಕಾರ' ಎಂದು ಬಣ್ಣಿಸಲಾಗಿದೆ.

ನ್ಯೂಯಾರ್ಕ್‌ನ ಖ್ಯಾತ ಮ್ಯಾಗಜಿನ್ ಟೈಮ್ಸ್ ಬಿಡುಗಡೆ ಮಾಡಿರುವ ವಿಶ್ವದ 25 ಅತ್ಯುತ್ತಮ ವೈಜ್ಞಾನಿಕ ಆವಿಷ್ಕಾರಗಳ ಪಟ್ಟಿಯಲ್ಲಿ ಮಂಗಳಯಾನಕ್ಕೆ ಮೊದಲ ಸ್ಥಾನ ಲಭಿಸಿದ್ದು, ಮಂಗಳಯಾನ ಯೋಜನೆ ಕುರಿತಂತೆ ಶ್ಲಾಘನೆ ವ್ಯಕ್ತವಾಗಿದೆ.

'ಮೊದಲ ಯತ್ನದಲ್ಲೇ ಯಾರೂ ಕೂಡ ಮಂಗಳನ ಅಂಗಳವನ್ನು ತಲುಪಿರಲಿಲ್ಲ. ಅಮೆರಿಕವಾಗಲೀ, ರಷ್ಯಾ ದೇಶವಾಗಲಿ, ಅಥವಾ ಯೂರೋಪಿಯನ್ನರಾಗಲಿ ಯಾರಿಗೂ ಕೂಡ ಮೊದಲ ಯತ್ನದಲ್ಲೇ ಮಂಗಳ ಒಲಿದಿರಲಿಲ್ಲ. ಆದರೆ ಸೆಪ್ಟೆಂಬರ್ 24ರಂದು ಭಾರತ ಆ ಸಾಧನೆ ಮಾಡಿತ್ತು. ಮಂಗಳಯಾನ ಯೋಜನೆಯು ಭಾರತಕ್ಕೆ ತಾಂತ್ರಿಕ ಐತಿಹಾಸಿಕ ಸಾಧನೆಯಾಗಿದ್ದು, ಯಾವುದೇ ಏಷ್ಯಾ ಖಂಡದ ದೇಶ ಸಾಧಿಸಲಾಗದ ಸಾಧನೆಯನ್ನು ಭಾರತ ಮಾಡಿ ತೋರಿಸಿದೆ' ಎಂದು ಟೈಮ್ಸ್ ಹೇಳಿದೆ.

ಅಲ್ಲದೆ ಭಾರತದ ಮಂಗಳಯಾನ ಯೋಜನೆಯನ್ನು 'ಸೂಪರ್ ಸ್ಮಾರ್ಟ್ ಬಾಹ್ಯಾಕಾಶ ಯೋಜನೆ' ಎಂದು ಬಣ್ಣಿಸಲಾಗಿದ್ದು, ಟೈಮ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿರುವ 25 ಅತ್ಯುತ್ತಮ ವೈಜ್ಞಾನಿಕ ಆವಿಷ್ಕಾರಗಳ ಪಟ್ಟಿಯಲ್ಲಿ ಭಾರತದ ಮಂಗಳಯಾನ ಯೋಜನೆ '2014ರ ಅತ್ಯುತ್ತಮ ಆವಿಷ್ಕಾರ' ಎಂಬ ಕೀರ್ತಿಗೆ ಭಾಜನವಾಗಿದೆ.

ಮಂಗಳಯಾನ ಯೋಜನೆಗೆ ವ್ಯಯವಾದ ಖರ್ಚಿನ ಕುರಿತೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿರುವ ಟೈಮ್ಸ್, 'ಇತ್ತೀಚೆಗೆ ತೆರೆಕಂಡು ಆಸ್ಕರ್ ಪ್ರಶಸ್ತಿ ಪಡೆದ ವೈಜ್ಞಾನಿಕ ಹಿನ್ನಲೆಯ 'ಗ್ರಾವಿಟಿ ' ಚಿತ್ರದ ಬಂಡವಾಳಕ್ಕಿಂತಲೂ ಮಂಗಳಯಾನ ಯೋಜನೆಯ ಬಜೆಟ್ ಕಡಿಮೆ ಇತ್ತು' ಎಂದು ಬಣ್ಣಿಸಿದೆ. ಅಲ್ಲದೆ 'ಮಂಗಳಯಾನ ಯೋಜನೆಯ ಯಶಸ್ಸಿನಿಂದಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತಕ್ಕೆ ಹೊಸ ಬಲ ಬಂದಿದ್ದು, ಭಾರತದ ಬಾಹ್ಯಾಕಾಶ ಸಂಶೋಧನೆಗಳಿಗೆ ಮತ್ತು ವೈಜ್ಞಾನಿಕ ಪ್ರಕ್ರಿಯೆಗಳಿಗೆ ಉತ್ತಮ ಭವಿಷ್ಯ ಒದಗಿಸಿದೆ' ಎಂದು ಟೈಮ್ಸ್ ಹೇಳಿದೆ.

ಒಟ್ಟಾರೆ ಕಳೆದ ಸೆಪ್ಟೆಂಬರ್ 24ರಂದು ಮಂಗಳನ ಕಕ್ಷೆ ಸೇರಿದ ಭಾರತದ ಕನಸಿನ ಯೋಜನೆ ಮಂಗಳಯಾನದ ಯಶಸ್ಸು ವಿಶ್ವ ಸಮುದಾಯಕ್ಕೆ ಅಚ್ಚರಿ ಮೂಡಿಸಿದ್ದು, ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಮಂಗಳಯಾನ ಯೋಜನೆಯನ್ನು ರೂಪಿಸಿದ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ವಿಶ್ವವೇ ಕೊಂಡಾಡುವಂತಾಗಿದೆ.\

SCROLL FOR NEXT