ಫರ್ಗುಸನ್: ಭದ್ರತಾ ಅಧಿಕಾರಿ ಡಾರೆನ್ ವಿಲ್ಸನ್ ಕಪ್ಪುವರ್ಣೀಯ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದ ಘಟನೆಗೆ ಸಂಬಂಧಿಸಿದಂತೆ ಭದ್ರತಾ ಅಧಿಕಾರಿ ಪರವಾಗಿ ತೀರ್ಪು ಬಂದಿದ್ದು ಇದನ್ನು ವಿರೋಧಿಸಿ ಸಾರ್ವಜನಿಕರು ಅಮೆರಿಕಾದ ಲಾಸ್ ಏಂಜಲ್ಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡಿದ್ದ ನ್ಯಾಯಾಧೀಶ ಬಾಬ್ ಮೈಕ್ ಅವರು ನಿನ್ನೆ ತೀರ್ಪು ಪ್ರಕಟಿಸಿದ್ದರು. ಡಾರೆನ್ ವಿಲ್ಸನ್‌ನ ಯಾವುದೇ ತಪ್ಪು ಮಾಡಿಲ್ಲ ಆದ ಕಾರಣ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತೀರ್ಪು ಪ್ರಕಟವಾಗಿತ್ತು. ಇದನ್ನು ವಿರೋಧಿಸಿ ಸಾರ್ವಜನಿಕರು ರಸ್ತೆಗಿಳಿದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ಡಾರನ್ ವಿಲ್ಸನ್ ಪರ ವಾದ ಮಂಡಿಸಿದ್ದ ವಕೀಲರು, ನನ್ನ ಕಕ್ಷಿದಾರ ಅವರಿಗೆ ನೀಡಿದ್ದ ತರಬೇತಿಯಂತೆ ಹಾಗೂ ಕಾನೂನಿನಂತೆ ನಡೆದುಕೊಂಡಿದ್ದಾರೆ ಎಂದು ವಾದಿಸಿದ್ದರು.
ಏನಿದು ಪ್ರಕರಣ?...
ಇದೇ ವರ್ಷ ಆಗಸ್ಟ್ 9 ರಂದು ಭದ್ರತಾ ಅಧಿಕಾರಿಯೊಬ್ಬ 18 ವರ್ಷದ ಕಪ್ಪು ವರ್ಣೀಯ ಯುವಕನೊಬ್ಬನಿಗೆ ನಿರಂತರವಾಗಿ ಗುಂಡಿನ ಮಳೆಗೆರೆದು ಹತ್ಯೆ ಮಾಡಿದ್ದನು. ಈ ಘಟನೆ ದೇಶದಾದ್ಯಂತ ಭಾರೀ ಸುದ್ದಿ ಮಾಡಿದ್ದು, ಅಧಿಕಾರಿಯ ಈ ವರ್ತನೆ ವಿರೋಧಿಸಿ ಅಮೆರಿಕದ ಕಪ್ಪು ವರ್ಣಿಯರು ಬೃಹತ್ ಪ್ರತಿಭಟನೆ ನಡೆಸಿದ್ದರು.
ಅಂದು ನಡೆದ ಬೃಹತ್ ಪ್ರತಿಭಟನೆ ಭದ್ರತಾ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರ ಮಧ್ಯೆ ಕಲ್ಲು ತೂರಾಟಕ್ಕೆ ಕಾರಣವಾಗಿತ್ತು. ಈ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರು. ತದನಂತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನೆಯನ್ನು ಹತ್ತಿಕ್ಕಲು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಆಗಮಿಸಿದ್ದರಾದರೂ ಉದ್ರಿಕ್ತರತ್ತ ತೆರಳಲು ಭದ್ರತಾ ಸಿಬ್ಬಂದಿಗಳು ಹಿಂಜರಿದಿದ್ದು, ಕರ್ಫ್ಯೂ ವಿಧಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಅಧಿಕಾರಿಯ ವಿರುದ್ಧ ನ್ಯಾಯದರ್ಶಿ ಮಂಡಳಿಯಿಂದ ವಿಚಾರಣೆ ಆರಂಭಗೊಂಡಿತ್ತು.