ಮುಂಬೈ: 26/11/2008ರ ಮುಂಬೈ ಮೇಲಿನ ಉಗ್ರರ ದಾಳಿ ನಡೆದು 6 ವರ್ಷಗಳು ಕಳೆದಿವೆ.
ಮುಂಬೈ ಮೇಲಿನ ದಾಳಿಗೆ ಇಂದಿಗೆ ಆರು ವರ್ಷದ ತುಂಬಿದ ಹಿನ್ನೆಲೆಯಲ್ಲಿ ದಾಳಿಯ ಸಂದರ್ಭದಲ್ಲಿ ಮೃತಪಟ್ಟ ಅಮಾಯಕರು, ಪೊಲೀಸರು ಮತ್ತು ಯೋಧರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
26/11/2008 ರ ಕರಾಳ ದಿನವನ್ನು ಭಾರತೀಯರು ಮರೆತಿಲ್ಲ. ಅದು ಮರೆಯಲಾಗದ ನೋವು. ವೀರ ಯೋಧರ ನೆನಪು ನಮ್ಮೆಲ್ಲರನ್ನು ಕಾಡುತ್ತಿರುವಾಗ ಉಗ್ರರ ಕರಿ ಛಾಯೆಯ ಭಯಾನಕ ದಾಳಿಯೂ ಕೂಡ ನಮ್ಮ ಕಣ್ಣುಂದೆ ಬಂದು ಹೋಗುತ್ತದೆ. ಉಗ್ರರ ದಾಳಿಗೆ ಅನೇಕರು ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮೋದಿ ಸಂದೇಶ ಕಳುಹಿಸಿದ್ದಾರೆ.
ಮುಂಬೈ ದಾಳಿಯಲ್ಲಿ ಅನೇಕರನ್ನು ರಕ್ಷಿಸಲು ಮುಂದಾಗಿ, ತಮ್ಮ ಪ್ರಾಣವನ್ನು ಕಳೆದುಕೊಂಡ ಪೊಲೀಸರೇ ನಮ್ಮ ನಿಜವಾದ ನಾಯಕರು ಎಂದು ಮೋದಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಹುತಾತ್ಮರನ್ನು ಸ್ಮರಿಸಿದರು.
2008ರ ನವೆಂಬರ್ 26ರಂದು ಪಾಕಿಸ್ತಾನದ ಹತ್ತು ಉಗ್ರರು ಭಾರತದೊಳಗೆ ಸಮುದ್ರದ ಮುಖಾಂತರ ನುಸುಳಿ, ವಾಣಿಜ್ಯ ನಗರಿ ಮುಂಬೈನ 7 ಕಡೆ ದಾಳಿ ನಡೆಸಿ, 166 ಜನರನ್ನು ಬಲಿ ತೆಗೆದುಕೊಂಡ ಕರಾಳ ದಿನ.
26/11/2008ರಂದು ಮುಂಬೈನ್ ಪ್ರಸಿದ್ಧ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ಕಾಮಾ ಆಸ್ಪತ್ರೆ ಸೇರಿದಂತೆ 7 ಕಡೆಗಳಲ್ಲಿ ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ 166 ಜನರು ಮೃತಪಟ್ಟಿದ್ದು, 308 ಜನರು ಗಾಯಗೊಂಡಿದ್ದರು.
ಸುಮಾರು 10 ಉಗ್ರರು ಈ ದಾಳಿ ನಡೆಸಿದ್ದರು. 68 ಗಂಟೆಗಳ ಕಾಲ ಭದ್ರತಾ ಸಿಬ್ಬಂದಿಗಳು ಉಗ್ರರೊಡನೆ ಹೋರಾಟ ನಡೆಸಿದ್ದರು. ಉಗ್ರರ ವಿರುದ್ಧ ಹೋರಾಟದಲ್ಲಿ 17 ಜನ ಭಧ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದರು.