ದೇಶ

ಜಪಾನ್‌ನಿಂದ ಅಂಡರ್ ವಾಟರ್ ಸಿಟಿ ನಿರ್ಮಾಣ?

Srinivasamurthy VN

ಟೋಕಿಯೊ: ಜಪಾನ್ ಮೂಲದ ನಿರ್ಮಾಣ ಸಂಸ್ಥೆಯೊಂದು ಅಂಡರ್ ವಾಟರ್ ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದು, ಈ ಕುರಿತು ವಿನೂತನ ಪ್ರಸ್ತಾಪವೊಂದನ್ನು ಸರ್ಕಾರದ ಮುಂದಿಟ್ಟಿದೆ.

ಮಿತಿ ಮೀರಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್‌ನಂತಹ ಗಂಭೀರ ಸಮಸ್ಯೆಗೆ ಜಪಾನ್ ಮೂಲದ ನಿರ್ಮಾಣ ಸಂಸ್ಥೆಯೊಂದು ವಿನೂತನ ಪರಿಹಾರವನ್ನು ಶೋಧಿಸಿದ್ದು, ಸಮುದ್ರದೊಳಗೇ ನಗರವನ್ನು ನಿರ್ಮಿಸುವ ವಿನೂತನ ಯೋಜನೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಶಿಮಿಝು ಕಾರ್ಪೊರೇಷನ್ ಎಂಬ ನಿರ್ಮಾಣ ಸಂಸ್ಥೆಯು ಮಾರ್ಡನ್ ಡೇ ಅಟ್ಲಾಂಟಿಸ್ ಎಂಬ ಮಾದರಿಯನ್ನು ಪ್ರಸ್ತುತಪಡಿಸಿದ್ದು, ಸಾಗರದ ತಳದಲ್ಲಿ ಸುರುಳಿಯಾಕಾರದ ನಗರವನ್ನು ನಿರ್ಮಾಣ ಮಾಡಬಹುದು ಎಂದು ಹೇಳಿಕೊಂಡಿದೆ.

ಸಾಗರದ ಸುಮಾರು 500 ಮೀಟರ್ ಆಳದಲ್ಲಿ ನಿರ್ಮಾಣವಾಗುವ ಈ ನಗರಕ್ಕೆ ಸುಮಾರು 16 ಬಿಲಿಯನ್ ಡಾಲರ್‌ಗಳು ಖರ್ಚಾಗಲಿದೆಯಂತೆ. ಇನ್ನು ಈ ವಿಶಾಲ ನಗರದಲ್ಲಿ ಸುಮಾರು 5000 ಮಂದಿ ನೆಲೆಸಬಹುದಾಗಿದ್ದು, ಜನವಸತಿ ಮನೆಗಳು, ಹೊಟೆಲ್‌ಗಳು, ಸೈಟ್‌ಗಳು ಮತ್ತು ವಾಣಿಜ್ಯ ಕಟ್ಟಡಗಳು ಇರಲಿವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅಂತೆಯೇ ಎಲ್ಲವೂ ನಿಗದಿತ ಸಮಯದಲ್ಲೇ ನಡೆದರೆ 2030ರ ವೇಳೆಗೆ ಈ ನಗರವನ್ನು ನಿರ್ಮಾಣ ಮಾಡುತ್ತೇವೆ ಎಂದು ಶಿಮಿಝು ಸಂಸ್ಥೆ ಬಹಳ ಹಮ್ಮಸ್ಸಿನಿಂದಲೇ ಹೇಳಿಕೊಂಡಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಿಮಿಝು ಸಂಸ್ಥೆಯ ಮುಖ್ಯಸ್ಥ ಹಿಡಿಯೋ ಇಮಮುರಾ, 'ಇದೀಗ ನಿಜವಾದ ಗುರಿ ನಮ್ಮ ಮುಂದಿದೆ. ಬಹಳ ವರ್ಷಗಳ ಹಿಂದೆ ಕಾರ್ಟೂನ್ ಪಾತ್ರವೊಂದು ಮೊಬೈಲ್ ಫೋನ್ ಬಳಕೆಯ ಕುರಿತು ಬೆಳಕು ಚಲ್ಲಿತ್ತು. ಇದಾದ ಬಳಿಕ ಮೊಬೈಲ್ ಫೋನ್ ಆವಿಷ್ಕಾರಗೊಂಡಿತ್ತು. ಪ್ರಸ್ತುತ ತಂತ್ರಜ್ಞಾನ ಬಹಳ ಮುಂದುವರೆದಿದ್ದು, ನಾವು ಹೇಗೆ ಈ ಯೋಜನೆಯನ್ನು ಜನರ ಕೈಗೆಟುಕುವಂತೆ ಮಾಡಬಹುದು ಎಂಬುದು ನಿಜಕ್ಕೂ ದೊಡ್ಡ ಸವಾಲು' ಎಂದು ಹೇಳಿದ್ದಾರೆ.

ಒಟ್ಟಾರೆ ನಮ್ಮ ಪುರಾತನ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಸಾಗರ ತಳದಲ್ಲಿನ ನಗರ ನಿರ್ಮಾಣ ಪರಿಕಲ್ಪನೆಯನ್ನು ಜಪಾನ್ ಮೂಲದ ನಿರ್ಮಾಣ ಸಂಸ್ಥೆ ನಿಜ ಮಾಡ ಹೊರಟಿದ್ದು, ಈ ಕೆಲಸದಲ್ಲಿ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

SCROLL FOR NEXT