ಬೆಂಗಳೂರು: ಕೆಲಸ ಮುಗಿಸಿಕೊಂಡು ಕಚೇರಿಯಿಂದ ಮನೆಗೆ ಹೋಗಲು ಆಟೊ ಹತ್ತಿದ ಮಹಿಳಾ ಟೆಕ್ಕಿಯನ್ನು ಆಟೊ ಚಾಲಕ ಮತ್ತು ಆತನ ಸಹಚರ ನಿರ್ಜನ ಪ್ರದೇಶಕ್ಕೆ ಕೆರೆದೊಯ್ದು ಹಲ್ಲೆ ನಡೆಸಿ ಚಿನ್ನಾಭರಣ, ಮೊಬೈಲ್ ಹಾಗೂ ಹಣ ದರೋಡೆ ಮಾಡಿದ್ದಾರೆ.
ಕೋಡಿಚಿಕ್ಕನಹಳ್ಳಿ ನಿವಾಸಿ ಮಧುಮಿತಾ (28) ದರೋಡೆಗೊಳಗಾದವರು. ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿರುವ ಮಧುಮಿತಾ, ಮಂಗಳವಾರ ರಾತ್ರಿ 7 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಲು ರಾಗಿಗುಡ್ಡ ಪ್ರದೇಶದಿಂದ ಆಟೊ ಹತ್ತಿದ್ದರು.
ಮೈಕೋ ಬಡಾವಣೆ ಸಮೀಪದ ವಿಜಯ ಬ್ಯಾಂಕ್ ಕಾಲೋನಿ ಬಳಿ ಅಪರಿಚಿತ ವ್ಯಕ್ತಿ ಆಟೋ ಹತ್ತಿ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದ. ಆರೋಪಿಗಳು ಬಿಳೇಕಳ್ಳಿ ಟ್ರಾಫಿಕ್ ಸಿಗ್ನಲ್‌ಗಿಂತ ಮೊದಲೆ ಹಠಾತ್ ಎಡ ತಿರುವು ತೆಗೆದುಕೊಂಡಿದ್ದಾರೆ. ತಮ್ಮ ಮಾರ್ಗ ಬಿಟ್ಟು ಬೇರೆ ಕಡೆ ಹೋಗುತ್ತಿರುವುದನ್ನು ಮನಗಂಡು ಭೀತಿಗೊಳಗಾದ ಮಧುಮಿತಾ ಕಿರುಚಿಕೊಂಡಿದ್ದಾರೆ.
ಅಷ್ಟರಲ್ಲೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ದುಷ್ಕರ್ಮಿಗಳು ಮಾರಕಾಸ್ತ್ರ ತೋರಿಸಿ ಒಡವೆ ಮತ್ತು ಹಣ ನೀಡುವಂತೆ ಬೆದರಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಮುಖಕ್ಕೆ ಗುದ್ದಿ, 1 ಚಿನ್ನದ ಸರ, 2 ಉಂಗುರ, ಮೊಬೈನ್ ಫೋನ್ ಮತ್ತು 400ರು ಕಿತ್ತುಕೊಂಡು, ಆಟೊದಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಮಧುಮಿತಾ ತಿಳಿಸಿದ್ದಾರೆ.
ಹಲ್ಲೆಯಿಂದ ಆಘಾತಕ್ಕೊಳಗಾದ ಮಧುಮಿತಾ ಸ್ಥಳೀಯರ ನೆರವಿಂದ ಮೈಕೋ ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಬಿಳೇಕಳ್ಳಿ ಸಿಗ್ನಲ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಪರಿಶೀಲಿಸಿ ದರೋಡೆಕೋರರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.