ನವದೆಹಲಿ: ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮೂರನೇ ಭಾಷೆಯಾಗಿ ಜರ್ಮನ್ ಬದಲು ಸಂಸ್ಕೃತವನ್ನು ಕಲಿಸುವ ನಿಲುವಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿವೆ. ನಿಮ್ಮ ತಪ್ಪಿಗೆ ವಿದ್ಯಾರ್ಥಿಗಳಿಗೆ ಯಾಕೆ ಶಿಕ್ಷೆ ಕೊಡುತ್ತೀರಿ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ಅರ್ಜಿಯೊಂದರ ವಿಚಾರಣೆ ನಡೆಸುತ್ತಿರುವ ನ್ಯಾ. ಎಆರ್ ದಾವೆ ಅವರಿದ್ದ ಪೀಠ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮೂರನೇ ಭಾಷೆಯಾಗಿ ಸಂಸ್ಕೃತವನ್ನು ಕಲಿಸುವ ಕುರಿತು ತೆಗೆದುಕೊಳ್ಳಲಾಗಿರುವ ನಿರ್ಧಾರವನ್ನು ಪುನರ್ ಪರಿಶೀಲಿಸಿ, ಈ ರೀತಿಯ ನಿರ್ಧಾರದಿಂದ ವಿದ್ಯಾರ್ಥಿಗಳ ಮೇಲೆ ಹೆಚ್ಚುವರಿ ಹೊರೆ ಹಾಕಿದಂತಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಜತಗೆ, ಈ ಸಂಬಂಧ ಸೂಕ್ತ ನಿರ್ಧಾರವೊಂದಕ್ಕೆ ಬರಲು ಸರ್ಕಾರಕ್ಕೆ ಒಂದು ವಾರದ ಕಾಲಾವಕಾಶವನ್ನೂ ನೀಡಿದೆ.
ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಕಲಿಸುವ ಪ್ರಸ್ತಾಪ ಒಳ್ಳೆಯ ನಿರ್ಧಾರವೇ. ಏಕೆಂದರೆ ಸಂಸ್ಕೃತ ಎಲ್ಲ ಭಾಷೆಗಳ ತಾಯಿ. ಆದರೆ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ನಿರ್ಧಾರ ಅನುಷ್ಠಾನಕ್ಕೆ ತರಲು ಹೊರಟಿರುವುದು ಸರಿಯಲ್ಲ. ಈ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರ ಕಳವಳವನ್ನೂ ಸರ್ಕಾರ ಪರಿಗಣಿಸಬೇಕು ಎಂದು ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರಿಗೆ ನ್ಯಾಯಾಲಯ ತಿಳಿಸಿದೆ.
ಮೂರನೇ ಭಾಷೆಯಾಗಿ ಸಂಸ್ಕೃತವನ್ನು ಕಲಿಸಲು ಹೊರಟಿರುವ ತನ್ನ ನಿರ್ಧಾರವನ್ನು ಗುರುವಾರ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿದ್ದ ಸರ್ಕಾರ, ಜರ್ಮನಿಯನ್ನು ಮೂರನೇ ಭಾಷೆಯಾಗಿ ಕಲಿಸುವ ಹಿಂದಿನ ಸರ್ಕಾರದ ನಿಲುವು ಸರಿಯಲ್ಲ ಎಂದು ವಾದ ಮಂಡಿಸಿತ್ತು.