ಮುಂಬೈ: ರಿಲಯನ್ಸ್ ಬಾಸ್ ಮುಕೇಶ್ ಅಂಬಾನಿ ಅವರ ನೆರೆಮನೆಯಲ್ಲಿ ವಾಸಿಸುವ ಆಸೆ ನಿಮಗಿದೆಯೇ? ಬರೀ 120 ಕೋಟಿ ವೆಚ್ಚ ಮಾಡಲು ತಯಾರಿದ್ದರೆ ಸಾಕು, ನಾಳೆಯೇ ನಿಮ್ಮ ಆಸೆ ಈಡೇರುತ್ತದೆ!
ಮುಕೇಶ್ ಅವರ ಆ್ಯಂಟೀಲಿಯಾ ಬಂಗಲೆ ಇರುವ ಮುಂಬೈನ ಟೋನಿ ಅಲ್ಟಾಮೌಂಟ್ ರಸ್ತೆಯಲ್ಲಿ ಈಗ ಕೇವಲ ಒಂದೇ ಒಂದು ಬಂಗಲೆ ಖಾಲಿಯಿದ್ದು, ಮಾರಾಟಕ್ಕೆ ಸಿದ್ಧವಾಗಿದೆ. ಈ ಮನೆಗೂ ಮುಕೇಶ್‌ರ ಬಂಗಲೆಗೂ ಇರುವುದು ಸಣ್ಣ ಓಣಿಯ ಅಂತರವಷ್ಟೆ. 120 ಕೋಟಿ ಖರ್ಚು ಮಾಡಿ ಇದನ್ನು ನೀವು ಖರೀದಿಸಿದ್ದೇ ಆದಲ್ಲಿ ವಿಶ್ವದ ಎರಡನೇ ಅತಿ ದುಬಾರಿ ಬಂಗಲೆಯ ಪಕ್ಕದಲ್ಲೇ ವಾಸಿಸುವ ಅದೃಷ್ಟ. ಹೀಗೆಂದು ರಿಯಲ್ ಎಸ್ಟೇಟ್ ಸಂಸ್ಥೆ ನೈಟ್ ಫ್ರಾಂಕ್ ಇಂಡಿಯಾ ಹೇಳಿದೆ.
ಮಾರಾಟಕ್ಕಿರುವ 3 ಮಹಡಿಯ ಬಂಗಲೆಯ ಹೆಸರು ಝೆಟಿಯಾ. ಇದು ಭಾರತದ ಮೊದಲ ಬ್ಯೂಟಿ ಕ್ರೀಂ 'ಆಫ್ಘನ್ ಸ್ನೋ'ವನ್ನು ಪರಿಚಯಿಸಿದ ಪಠಾಣ್ ವಾಲಾರ ಕುಟುಂಬಕ್ಕೆ ಸೇರಿದೆ.
ಈ ಕುಟುಂಬವು ಈಗ ಬಂಗಲೆಯನ್ನು ಮಾರಲು ಮುಂದಾಗಿದೆಯಾದರೂ ಎಷ್ಟು ಬೆಲೆ ಎಂಬುದನ್ನು ಘೋಷಿಸಿಲ್ಲ. ಆದರೆ ಮೂಲಗಳ ಪ್ರಕಾರ ಇದರ ಬೆಲೆ 120 ಕೋಟಿ.