ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಸೇರಿದಂತೆ ಪ್ರಕರಣದ ಇತರೆ ಮೂವರ ಆರೋಪಿಗಳು ಜಾಮೀನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಯಲಲಿತಾ ಅವರ ಸ್ವೇಹಿತೆಯರಾದ ಶಶಿಕಲಾ, ಜೆ.ಇಳವರಸಿ ಮತ್ತು ಜಯಾ ಅವರ ದತ್ತು ಪುತ್ರ ಸುಧಾಕರನ್ ಅವರು ಜಯಲಲಿತಾ ಅವರೊಂದಿಗೆ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.
ತಾವು ಅನಾರೋಗ್ಯದಿಂದ ಬಳಲುತ್ತಿದ್ದು, ಹಲವು ದಿನಗಳಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದೇನೆ. ಹೀಗಾಗಿ ತಮಗೆ ಜಾಮೀನು ಮಂಜೂರು ಮಾಡಬೇಕು ಎಂದು ಜಯಲಲಿತಾ ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಈ ಹಿಂದೆ ಕರ್ನಾಟಕ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಜಯಲಲಿತಾ ಪರವಕೀಲ ರಾಮ್ ಜೇಠ್ಮಲಾನಿ ಅವರು ಅರ್ಜಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಳೆದ ಮಂಗಳವಾರ ನ್ಯಾಯಾಲಯ ವಜಾಗೊಳಿಸಿತ್ತು. ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರು, ಇದು ಭ್ರಷ್ಟಾಚಾರ ಪ್ರಕರಣವಾಗಿದ್ದರಿಂದ ಜಾಮೀನು ನೀಡಲು ಬರುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರುಪಾಯಿ ದಂಡ ವಿಧಿಸಿದ್ದ ಸಿಬಿಐ ವಿಶೇಷ ಕೋರ್ಟ್‌ನ ತೀರ್ಪನ್ನು ಅಮಾನತ್ತಿನಲ್ಲಿಡಲು ಕೋರ್ಟ್ ನಿರಾಕರಿಸಿತ್ತು.
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಮತ್ತು ಅವರ ಮೂವರು ಸಹಚರರು ಅಪರಾಧಿಗಳೆಂದು ಘೋಷಿಸಿದ್ದ ವಿಶೇಷ ನ್ಯಾಯಾಲಯ ಜಯಲಲಿತಾ ಅವರಿಗೆ ಭ್ರಷ್ಟಾಚಾರ ನಿಯಂತ್ರಣಕಾಯ್ದೆಯ ಅಡಿಯಲ್ಲಿ 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ದಂಡ ಮತ್ತು ಶಶಿಕಲಾ, ಇಳವರಸಿ, ಸುಧಾಕರನ್ ಅವರಿಗೆ 4 ವರ್ಷ ಜೈಲು ಶಿಕ್ಷೆ, ತಲಾ 10 ಕೋಟಿ ದಂಡ ವಿಧಿಸಿತ್ತು.