ದೇಶ

ವಿಶ್ಯಾನಂದ್: ಪುಟ್ಟ ಗ್ರಹವೊಂದಕ್ಕೆ ವಿಶ್ವನಾಥನ್ ಆನಂದ್ ಹೆಸರು

Rashmi Kasaragodu

ನವದೆಹಲಿ: ಸೌರವ್ಯೂಹದಲ್ಲಿ ಮಂಗಳ ಮತ್ತು ಗುರುಗ್ರಹದ ನಡುವೆ ಇರುವ ಪುಟ್ಟ ಗ್ರಹವೊಂದಕ್ಕೆ ಭಾರತದ ಪ್ರಪ್ರಥಮ ಚೆಸ್ ಗ್ರ್ಯಾಂಡ್ ಮಾಸ್ಟರ್, ವಿಶ್ವನಾಥನ್ ಆನಂದ್ ಅವರ ಹೆಸರಿಡಲಾಗಿದೆ.  

ಈ ಹಿಂದೆ ಮಾಜಿ ಚೆಸ್ ಚಾಂಪಿಯನ್‌ಗಳಾದ ಅಲೆಕ್ಸಾಂಡರ್ ಅಲೆಖಿನೆ ಮತ್ತು ಅನಾಟೊಲಿ ಕಾರ್‌ಪ್ರೋವ್ ಅವರ ಹೆಸರುಗಳನ್ನು ಇಂಥಾ ಗ್ರಹಗಳಿಗೆ ಇರಿಸಲಾಗಿತ್ತು.

ಇತ್ತೀಚೆಗೆ ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಸಂಘಟನೆಯು ಮಿಚೆಲ್ ರುಡೆಂಕೋ ಅವರನ್ನು ಆಹ್ವಾನಿಸಿ ಪುಟ್ಟ ಗ್ರಹವೊಂದಕ್ಕೆ ಹೆಸರು ಸೂಚಿಸುವಂತೆ ಕೋರಿತ್ತು.  ಮಿಚೆಲ್ ರುಡೆಂಕೋ ಅವರು ಚೆಸ್ ಪ್ರಿಯರಾಗಿದ್ದು,  ವಿಶ್ವನಾಥನ್ ಆನಂದ್ ಅವರ ಹೆಸರನ್ನು ಸೂಚಿಸಿದ್ದರು.  ಅದಕ್ಕೆ ಅಂಗೀಕಾರವೂ ಸಿಕ್ಕಿತು.

1988 ಅಕ್ಟೋಬರ್ 10ರಂದು ಜಪಾನ್‌ನ ಕೆನ್‌ಜೋ ಸುಜುಕಿ ಮಂಗಳ ಮತ್ತು ಗುರು ಗ್ರಹದ ನಡುವಿನ ಪುಟ್ಟ ಗ್ರಹವನ್ನು ಪತ್ತೆ ಹಚ್ಚಿದ್ದರು. ಆದರೆ ಈವರೆಗೆ ಅದಕ್ಕೆ ಹೆಸರಿಡಲು ಸಾಧ್ಯವಾಗಲೇ ಇಲ್ಲ. ಇಲ್ಲಿಯವರೆಗೆ ಆ ಗ್ರಹವನ್ನು 4538 ಎಂದೇ ಕರೆಯಲಾಗುತ್ತಿತ್ತು.
ಇದೀಗ ಆ ಪುಟ್ಟ ಗ್ರಹಕ್ಕೆ 4538 -'ವಿಶ್ಯಾನಂದ್' ಎಂದು ನಾಮಕರಣ ಮಾಡಲಾಗಿದೆ.

ಪುಟ್ಟ ಗ್ರಹಳೆಂದರೆ ಯಾವ ತರದ್ದು?

ಸೌರವ್ಯೂಹದಲ್ಲಿ ಸೂರ್ಯನ ಸುತ್ತ ತಿರುಗುವ ಈ ಪುಟ್ಟ ವಸ್ತುಗಳನ್ನು ಇತ್ತ ಗ್ರಹಗಳೆಂದೂ ಕರೆಯಲಾಗುವುದಿಲ್ಲ, ಧೂಮಕೇತುಗಳೆಂದೂ ಹೇಳಲಾಗುವುದಿಲ್ಲ. ಇವು ಕ್ಷುದ್ರ ಗ್ರಹಗಳ ಪಟ್ಟಿಗೆ ಸೇರಿದವುಗಳಾಗಿವೆ . ಈ ಪುಟ್ಟ ಗ್ರಹಗಳನ್ನು ಸಣ್ಣ ಆಕಾಶಕಾಯ, ಟ್ರೋಜನ್, ಸೆಂಟಾರಸ್,  ಕ್ಯುಪೆರ್ ಬೆಲ್ಟ್ ಆಬ್ಜೆಕ್ಟ್‌ಗಳು ಮತ್ತು ನೆಪ್ಚೂನಿಯನ್ ಆಬ್ಜೆಕ್ಟ್ ಗಳು ಎಂದು ವಿಂಗಡಿಸಬಹುದು.

1801ರಲ್ಲಿ ಮೊದಲ ಬಾರಿಗೆ ಸೆರೆಸ್ ಎಂಬ ಪುಟ್ಟ ಗ್ರಹವನ್ನು ಪತ್ತೆ ಹಚ್ಚಲಾಯಿತು. 19ನೇ ಶತಮಾನದಲ್ಲಿ ಸೌರವ್ಯೂಹದಲ್ಲಿ ಕಾಣಲ್ಪಡುವ ಈ ರೀತಿಯ ಪುಟ್ಟ ವಸ್ತುಗಳನ್ನು ಪುಟ್ಟ ಗ್ರಹಗಳೆಂದು ಕರೆಯಲಾಯಿತು.


SCROLL FOR NEXT