ಪಣಜಿ: ಸರ್ಕಾರಿ ನೌಕರನಿಗೆ ಕಪಾಳಕ್ಕೆ ಹೊಡೆದು ಶಿಕ್ಷೆಗೆ ಗುರಿಯಾಗಿದ್ದ ಗೋವಾ ಸಚಿವ ಫ್ರಾನ್ಸಿಸ್ಕೋ ವಿಕಿ ಪಾಚಿಕೋ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2006ರಲ್ಲಿ ತನ್ನ ಆಪ್ತ ಸಹಾಯಕನ ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಫ್ರಾನ್ಸಿಸ್ಕೋ ಇಂಜಿನಿಯರೊಬ್ಬರ ಮೇಲೆ ಹಲ್ಲೆ ಮಾಡಿದ್ದರು. ಗೋವಾ ವಿಕಾಸ ಪಾರ್ಟಿ ಶಾಸಕರಾಗಿದ್ದ ಫ್ರಾನ್ಸಿಸ್ಕೋ ವಿಕಿ ಪಾಚಿಕೋ ಕಿರಿಯ ಇಂಜಿನಿಯರ್ ಕಪಿಲ್ ನಟೇಕರ್ ಎಂಬ ಇಂಜಿನಿಯರ್‌ಗೆ ಕಪಾಳಕ್ಕೆ ಹೊಡೆದಿದ್ದರು.
ಈ ಸಂಬಂಧ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಫ್ರಾನ್ಸಿಸ್ಕೋ ವಿಕಿ ಪಾಚಿಕೋಗೆ ಸ್ಥಳೀಯ ನ್ಯಾಯಾಲಯ ಆರು ತಿಂಗಳ ಶಿಕ್ಷೆ ನೀಡಿತ್ತು.
ಆದರೆ, ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಸಚಿವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿರುವುದು ಕಾನೂನಿನ ಪ್ರಕಾರ ತಪ್ಪು. ಹೀಗಾಗಿ ಆರು ತಿಂಗಳು ಶಿಕ್ಷೆ ನೀಡಿರುವ ಸ್ಥಳೀಯ ನ್ಯಾಯಾಲಯದ ತೀರ್ಪು ಎತ್ತಿಹಿಡಿಯಲಾಗುವುದು ಎಂದು ಆದೇಶಿಸಿತ್ತು.
ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು.