ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ದೆಹಲಿಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಇತ್ತೀಚೆಗೆ ಸಾಂಬಾ ಸೆಕ್ಟರ್ ನಲ್ಲಿ ಉಗ್ರರು ನಡೆಸಿದ್ದ ದಾಳಿ ಮಾದರಿಯಲ್ಲಿಯೇ ದೆಹಲಿ ಮೇಲೆ ದಾಳಿ ಮಾಡುವ ಕುರಿತು ಕೇಂದ್ರೀಯ ಗುಪ್ತಚರ ಸಂಸ್ಥೆ ಕೇಂದ್ರ ಗೃಹ ಇಲಾಖೆಗೆ ಎಚ್ಚರಿಕೆ ನೀಡಿದೆ. ಹೀಗಾಗಿ ದೆಹಲಿಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ವಿಧಿಸಲಾಗಿದೆ.
ಕಳೆದ ವಾರ ಪಾಕಿಸ್ತಾನ ವ್ಯಾಪ್ತಿಯ ಸಾಂಬಾ ಸೆಕ್ಟರ್ ನಲ್ಲಿ ಉಗ್ರರು ಭೀಕರ ದಾಳಿ ನಡೆಸಿದ್ದರು. ಟ್ರಕ್ ವೊಂದರಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತುಂಬಿ ಅದನ್ನು ಸೇನಾ ಕಟ್ಟಡವೊಂದಕ್ಕೆ ನುಗ್ಗಿಸಿದ್ದರು. ಬಳಿಕ ಪಾಕ್ ಯೋಧರನ್ನು ಗುರಿಯಾಗಿಸಿಕೊಂಡು ಮನಸೋ ಇಚ್ಛೆ ಗುಂಡಿನ ಮಳೆಗರೆದಿದ್ದರು. ಇದೇ ಮಾದರಿಯಲ್ಲಿ ದೆಹಲಿಯಲ್ಲಿ ದಾಳಿ ನಡೆಯುವ ಕುರಿತು ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ದೆಹಲಿಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದ್ದು, ಸಂಸತ್ ಭವನ, ರಾಷ್ಟ್ರಪತಿ ಭವನ ಸೇರಿದಂತೆ ಸರ್ಕಾರಿ ಕಚೇರಿಗಳು, ಗಣ್ಯರ ನಿವಾಸಗಳು ಮತ್ತು ನ್ಯಾಯಾಲಯಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ಕಳೆದ ಮಾರ್ಚ್ 21ರಂದು ಜೈಷ್ ಇ ಮೊಹಮದ್ ಎಂಬ ಉಗ್ರ ಸಂಘಟನೆಯ ಕೆಲ ಉಗ್ರರು ಸಾಂಬಾ ಸೆಕ್ಟರ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಉಗ್ರರಿಗೆ ತೀವ್ರ ಪ್ರತಿರೋಧ ಒಡ್ಡಿದ್ದ ಭಾರತೀಯ ಸೇನೆ ಉಗ್ರರನ್ನು ಹಿಮ್ಮೆಟಿಸುವಲ್ಲಿ ಯಶಸ್ವಿಯಾಗಿತ್ತು. ಆಗ ದೊರೆತ ಮಾಹಿತಿಯನ್ನಾಧರಿಸಿರುವ ಕೇಂದ್ರ ಗುಪ್ತಚರ ಇಲಾಖೆ ದೆಹಲಿಯಲ್ಲಿ ದಾಳಿ ನಡೆಯುವ ಕುರಿತು ಮಾಹಿತಿ ಕಲೆಹಾಕಿದೆ.