ನವದೆಹಲಿ: ಯೆಮೆನ್‍ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ `ಆಪರೇಷನ್ ರಾಹತ್' ಯುದ್ಧದೋಪಾದಿಯಲ್ಲಿ ನಡೆಯುತ್ತಿದೆ. ಆದರೆ ಆ್ಯಡೆನ್ ಬಂದರು ಸಮೀಪ ಭೀಕರ ಕಾಳಗ ನಡೆಯುತ್ತಿದೆ. ಹೀಗಿದ್ದರೂ ಅಲ್ಲಿಂದ ಭಾರತೀಯರನ್ನು ಸಾಹಸದಿಂದ ರಕ್ಷಿಸಲಾಗಿದೆ.
ರಕ್ಷಣಾ ಕಾರ್ಯಕ್ಕಾಗಿ ಕಳುಹಿಸಲಾಗಿರುವ ಯುದ್ಧ ನೌಕೆ ಐಎನ್‍ಎಸ್ ಮುಂಬೈಗೆ ಆ್ಯಡೆನ್ ಬಂದರು ಪ್ರವೇಶಕ್ಕೆ ಬಂಡುಕೋರರ ಶೆಲ್ ದಾಳಿ ಅಡ್ಡಿಯಾಗಿದೆ. ಈ ನೌಕೆಯಲ್ಲಿ ಹೆಚ್ಚುವರಿಯಾಗಿ 12 ಸಣ್ಣ ಪ್ರಮಾಣದ ದೋಣಿಗಳನ್ನು ಜೋಡಿಸಲಾಗಿದೆ.
ಈ ಮೂಲಕ ತಂತ್ರಬದ್ಧವಾಗಿ ಭಾರತೀಯರನ್ನು ಪಾರು ಮಾಡುವ ಯೋಜನೆ ರೂಪಿಸಿದೆ ನೌಕಾಪಡೆ. ಈವರೆಗೆ 1,350 ಮಂದಿಯನ್ನು ಸ್ವದೇಶಕ್ಕೆ ಕರೆತರಲಾಗಿದೆ. ಇದೇ ವೇಳೆ ಯೆಮೆನ್ ಕಾಳಗದಲ್ಲಿ ಖೈದಾ ಹಿಡಿತ ಬಲ ಗೊಳ್ಳುತ್ತಿರುವುದರಿಂದ ಪರಿಸ್ಥಿತಿ ಭೀಕರವಾಗಿದೆ ಎಂದು ನೌಕಾಪಡೆ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.