ದೇಶ

ಮೋದಿ ಸರ್ಕಾರದಿಂದ ರೈತರಿಗೆ ಬಂಪರ್ ಕೊಡುಗೆ, ಬೆಳೆಹಾನಿ ಪರಿಹಾರ ಶೇ.50ರಷ್ಟು ಹೆಚ್ಚಳ

Lingaraj Badiger

ನವದೆಹಲಿ: ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬೆಳೆಹಾನಿ ಪರಿಹಾರದ ಮೊತ್ತವನ್ನು ಶೇ.50ರಷ್ಟು ಹೆಚ್ಚಿಸುವುದಾಗಿ ಬುಧವಾರ ಪ್ರಕಟಿಸಿದ್ದಾರೆ. ಅಲ್ಲದೆ ಬೆಳೆ ಹಾನಿಯ ಮಾನದಂಡವನ್ನು ಸಹ ಸುಲಭಗೊಳಿಸಿದ್ದಾರೆ.

ದೆಹಲಿಯಲ್ಲಿ 20 ಸಾವಿರ ಕೋಟಿ ರುಪಾಯಿ ಮೂಲ ಬಂಡವಾಳದ ಮುದ್ರಾ ಬ್ಯಾಂಕ್‌ಗೆ ಚಾಲನೆ ನೀಡಿ ಮಾತನಾಡಿದ ಮೋದಿ, ಅಕಾಲಿಕ ಮಳೆಯಿಂದ ಸಂಕಷ್ಟಕ್ಕೀಡಾಗುವ ರೈತರಿಗೆ ನೀಡುವ ಪರಿಹಾರದ ಪ್ರಮಾಣವನ್ನು ಹೆಚ್ಚಿಸುವ ಮಹತ್ವದ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ ಎಂದರು.

ಪರಿಹಾರದ ಪ್ರಮಾಣವನ್ನು ಶೇ.5ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಇದರಿಂದ 100 ರುಪಾಯಿ ಪರಿಹಾರ ಪಡೆಯುತ್ತಿದ್ದ ರೈತರು ಇನ್ನುಮುಂದೆ 150 ರುಪಾಯಿ ಪರಿಹಾರ ಪಡೆಯಲಿದ್ದಾರೆ. ಮೊದಲು 1 ಲಕ್ಷ ಪರಿಹಾರ ಪಡೆಯುತ್ತಿದ್ದರೆ ಈಗ 1.5 ಲಕ್ಷ ಪರಿಹಾರ ಪಡೆಯಲಿದ್ದಾರೆ ಎಂದು ತಿಳಿಸಿದರು.

ಸರ್ಕಾರದ ಪರಿಹಾರ ಪಡೆಯಲು ಈ ಮೊದಲಿನ ಶೇ 50ರಷ್ಟು ಬೆಳೆಹಾನಿ ನಿಯಮವನ್ನು ಶೇ 33ಕ್ಕೆ ತಗ್ಗಿಸಲಾಗಿದೆ. ಇದರಿಂದ ಹೆಚ್ಚಿನ ರೈತರಿಗೆ ನೆರವಾಗಲಿದೆ’ ಎಂದು ಪ್ರಧಾನಿ ಹೇಳಿದರು.

ಈ ನಿಯಮ ಸಡಿಲಿಕೆಯಿಂದಾಗಿ ಸುಮಾರು 14 ರಾಜ್ಯಗಳಲ್ಲಿ ಅಕಾಲಿಕ ಮಳೆಯಿಂದ ಹಾನಿಗೊಂಡ 120 ಲಕ್ಷ ಹೆಕ್ಟೇರ್ ಪ್ರದೇಶಗಳ ರೈತರಿಗೆ ಅನುಕೂಲವಾಗಲಿದೆ.

SCROLL FOR NEXT