ದೇಶ

ಶೋಭಾ ಡೇ 'ದಾದಾಗಿರಿ' ಟ್ವೀಟ್ ವಿರುದ್ಧ ಶಿವಸೇನೆ ಪ್ರತಿಭಟನೆ

Lingaraj Badiger

ಮುಂಬೈ: ಲೇಖಕಿ ಶೋಭಾ ಡೇ ಅವರ 'ದಾದಾಗಿರಿ' ಟ್ವೀಟ್ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ, ಲೇಖಕಿಯ ಹೇಳಿಕೆಯನ್ನು ಖಂಡಿಸಿ ಗುರುವಾರ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದೆ.

ದಕ್ಷಿಣ ಮುಂಬೈನಲ್ಲಿರುವ ಶೋಭಾ ಡೇ ಅವರ ನಿವಾಸದ ಬಳಿ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮುಂಬೈ ಪೊಲೀಸರು ಆಗಮಿಸಿದ್ದು, ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

ರಾಜ್ಯದ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೈಂಟೈಮ್ ಅಂದರೆ ಸಂಜೆ 6ರಿಂದ 9ಗಂಟೆ ಅವಧಿಯಲ್ಲಿ ಕೇವಲ ಮರಾಠಿ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಬೇಕು ಎಂಬ ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಶೋಭಾ ಡೇ ಟೀಕಿಸಿದ್ದರು. ಅಲ್ಲದೆ ಮಾಹಾ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು 'ದಿಕ್ತಟ್‌ವಾಲಾ', ಸರ್ಕಾರದ ಕ್ರಮವನ್ನು 'ದಾದಾಗಿರಿ' ಎಂದು ಟ್ವೀಟ್ ಮಾಡಿದ್ದರು. ಶೋಭಾ ಡೇ ಅವರ ಈ ಟ್ವೀಟ್ ಮಹಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ನಿನ್ನೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ ನೇತೃತ್ವದಲ್ಲಿ ಖಂಡನಾ ನಿರ್ಣಯ ಮಂಡಿಸಲಾಗಿತ್ತು.

ಶೋಭಾ ಡೇ ಟ್ವೀಟ್
ಇನ್ಮೇಲೆ ಮಲ್ಟಿಪ್ಲೆಕ್ಸ್‌ನಲ್ಲಿ ಪಾಪ್ ಕಾರ್ನ್ ಮಾರುವ ಬದಲು ದಹಿ ಮಸಾಲೆ ಹಾಗೂ ವಡಾ ಪಾವ್ ಮಾರಬೇಕೆಂದು ಆದೇಶ ನೀಡಿದರೂ ಅಚ್ಚರಿ ಇಲ್ಲ. ಬೀಫ್ ಬ್ಯಾನ್ ಮಾಡಿದ ನಂತರ ಮುಖ್ಯಮಂತ್ರಿಗಳ ಕಣ್ಣು ಈಗ ಸಿನಿಮಾಗಳತ್ತ ಬಿದ್ದಿದೆ. ನಾವು ಪ್ರೀತಿಸೋ ಮಹಾರಾಷ್ಟ್ರ ಇದಲ್ಲ. ನಾವು ಯಾವ ಸಿನಿಮಾ ಯಾವ ಹೊತ್ತಿಗೆ ನೋಡಬೇಕು ಅನ್ನೋದು ನಮಗೆ ಬಿಟ್ಟಿದ್ದು. ಇದು ಮುಖ್ಯಮಂತ್ರಿಯ ದಾದಾಗಿರಿ. ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಚರ್ಚಿಸದೆ ಏಕಾಏಕಿ ನಿರ್ಧರಿಸಿದ್ದು ತಪ್ಪು. ಹಾಗಿದ್ದಲ್ಲಿ ಮಲ್ಟಿಪ್ಲೆಕ್ಸ್ ಗಳಿಗೆ ಸರ್ಕಾರ ಸಹಾಯ ಧನವನ್ನೂ ಘೋಷಿಸಲಿ ಎಂದು ಪ್ರತೇಕ ಟ್ವೀಟ್‌ಗಳಲ್ಲಿ ಬರೆದುಕೊಂಡಿದ್ದಾರೆ.

ಈ ಟ್ವೀಟ್‌ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ನಾನು ಮರಾಠಿ ವಿರೋಧಿಯಲ್ಲ. ನಾನು ಮರಾಠಿ ಸಿನಿಮಾ ಮತ್ತು ಭಾಷೆ ಅಭಿಮಾನಿ ಎಂದು ಮತ್ತೊಂದು ಟ್ಟೀಟ್ ಮಾಡಿದ್ದಾರೆ.

SCROLL FOR NEXT