ಲಂಡನ್: ಇಸ್ಲಾಮಿಕ್ ಸ್ಟೇಟ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಯಾಜಿದಿ ಸಮುದಾಯದ ನೂರಾರು ಮಹಿಳೆಯರ ಮೇಲೆ ಉಗ್ರರು ಬಹಿರಂಗವಾಗಿ ಅತ್ಯಾಚಾರವಾಗಿರುವುದಲ್ಲದೇ, ಚಿತ್ರ ಹಿಂಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಅಪಹರಣಕ್ಕೊಳಗಾಗಿದ್ದ ಮಹಿಳೆಯರನ್ನು ಬಿಡುಗಡೆ ಮಾಡಲಾಗಿದೆ. ಯಾಜಿದಿ ಸಮುದಾಯದ 200ಕ್ಕೂ ಹೆಚ್ಚು ಮಹಿಳೆಯರು ತಾವು ಅನುಭವಿಸಿದ ಭಯಾನಕ ನರಕದ ಬಗ್ಗೆ ಹೇಳಿಕೊಂಡಿದ್ದಾರೆ.
ಉತ್ತರ ಇರಾಕ್‌ನ ಸಿಂಜಾರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶದಿಂದ ನೂರಾರು ಮಹಿಳೆಯರು ಮತ್ತು ಮಕ್ಕಳನ್ನು ಇಸ್ಲಾಮಿಕ್ ಸ್ಟೇಟ್ (ಇಸಿಸ್) ಉಗ್ರರು ಅಪಹರಿಸಿ, ಕಳೆದ ಎಂಟು ತಿಂಗಳ ಕಾಲ ಅವರನ್ನು ಒತ್ತೆ ಇರಿಸಿಕೊಳ್ಳಲಾಗಿತ್ತು.
ಅವರಲ್ಲಿ ಕೆಲವು ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿ ಐ.ಎಸ್ ಉಗ್ರರಿಗೆ ನೀಡಲಾಗಿದ್ದರೆ, ಮತ್ತೆ ಕೆಲವರನ್ನು ಉಡುಗೊರೆ ರೂಪದಲ್ಲಿ ನೀಡಲಾಗಿತ್ತು. ಯಾಜಿದಿ ಮಹಿಳೆಯರಿಗೆ ಮನ ಬಂದಂತೆ ಥಳಿಸಿದ ಉಗ್ರರು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಯಾಜಿದಿ ಸಂತ್ರಸ್ತರಿಗಾಗಿ ಕೆಲಸ ಮಾಡುತ್ತಿರುವ ಜಿಯಾದ್ ಶಮ್ಮೊ ಖಲಫ್ ಅವರು ಮಾತನಾಡಿ, ಕಿರ್ಕುಕ್ ಸಮೀಪದ ಹಿಮೆರಾ ಎಂಬಲ್ಲಿ 200ಕ್ಕೂ ಹೆಚ್ಚು ಮಹಿಳೆಯರನ್ನು ಬಿಡುಗಡೆ ಮಾಡಲಾಗಿದೆ. ಉಗ್ರರ ಹಿಂಸೆಗೆ ಒಳಗಾದ ಮಹಿಳೆಯರು ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಮಕ್ಕಳನ್ನು ತಾಯಂದಿರಿಂದ ಬೇರ್ಪಡಿಸಲಾಗುತ್ತಿತ್ತು. ಈ ಮಕ್ಕಳನ್ನು ನಂತರ ಐ.ಎಸ್ ಹಿಡಿತದಲ್ಲಿರುವ ಮೋಸುಲ್ ಮತ್ತು ತಲ್ ಅಫರ್ ಪಟ್ಟಣದ ಮನೆಗಳಿಗೆ ವಿತರಿಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ಯಾಜಿದಿ ಮಹಿಳೆಯರ ಮೇಲೆ ಬಹಿರಂಗವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಲೈಂಗಿಕ ದೌರ್ಜನ್ಯ, ಹೊಡೆತ ಸೇರಿದಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ ಎಂದು ಖಲಫ್ ಹೇಳಿದ್ದಾರೆ.
ಗಾಯಗೊಂಡಿರುವ ಉಗ್ರರಿಗೆ ರಕ್ತ ನೀಡುವಂತೆ ಈ ಮಹಿಳೆಯರಿಗೆ ಬಲವಂತ ಮಾಡಲಾಗುತ್ತಿತ್ತು. 3-4 ಜನ ಉಗ್ರರು ಓರ್ವ ಮಹಿಳೆ ಮೇಲೆ ಬಹಿರಂಗವಾಗಿ ಸಾಮೂಹಿಕ ಅತ್ಯಾಚಾರ ಮಾಡುತ್ತಿದ್ದರು. ಅಲ್ಲದೆ, ಬಾಲಕಿಯರ ಮೇಲೆಯೂ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.