ಮುಂಬೈ: ಜೆಡಿಯು ಮುಖ್ಯಸ್ಥ ಶರದ್ ಯಾದವ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಪದ್ಮ ಪ್ರಶಸ್ತಿಯನ್ನು ಭ್ರಷ್ಚಾಚಾರಿಗಳು, ಅಪಾತ್ರರು ಹಾಗೂ ಮೇಲ್ವರ್ಗದವರಿಗಷ್ಟೇ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಮಾಜವಾದಿ ವ್ಯಕ್ತಿಗಳು ಪದ್ಮಶ್ರೀ ಹಾಗೂ ಪದ್ಮಭೂಷಣವನ್ನು ತಿರಸ್ಕರಿಸಬೇಕು. ಈ ರೀತಿಯ ಪ್ರಶಸ್ತಿಗಳನ್ನು ಕೇವಲ ಭ್ರಷ್ಟರು, ಸಮಾಜದ ಉನ್ನತ ಸ್ತರದಲ್ಲಿರುವವರಿಗಷ್ಟೇ ನೀಡಲಾಗುತ್ತದೆ.
ದಲಿತನಿಗಾಗಲಿ, ಆದಿವಾಸಿಗಾಗಲಿ ಅಥವಾ ರೈತನಿಗಾಗಲಿ ಈವರೆಗೆ ಈ ಪ್ರಶಸ್ತಿ ನೀಡಿಲ್ಲ ಎಂದು ಅವರು ಹಿರಿಯ ಸಮಾಜವಾದಿ ನಾಯಕರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನಂತರ ಸುದ್ದಿಗಾರರ ಮುಂದೆಯೂ ಯಾದವ್ ಅವರು ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಾಗಿದ್ದೇನೆ. 68 ವರ್ಷದಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ರೈತನಿಗಾಗಲಿ, ಆದಿವಾಸಿ ಅಥವಾ ದಲಿತನಿಗೆ ನೀಡಲಾಗಿದೆಯೇ ಎಂದು ಯಾದವ್ ಪ್ರಶ್ನಿಸಿದ್ದಾರೆ.ಯಾದವ್ ಅವರು ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ದಕ್ಷಿಣ ಭಾರತದ ಮಹಿಳೆಯರ ಬಣ್ಣದ ವಿಚಾರ ಎತ್ತುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.