ದೇಶ

ಕೋಳಿ ಜ್ವರ ಭೀತಿ, ತೆಲಂಗಾಣದಲ್ಲಿ ೩೫ಸಾವಿರ ಕೋಳಿ ಭಸ್ಮ

Guruprasad Narayana

ಹೈದರಾಬಾದ್: ಹಂದಿಜ್ವರದ ನಂತರ ಈಗ ಕೋಳಿಜ್ವರ ತೆಲಂಗಾಣದ ಜನರಲ್ಲಿ ಭೀತಿ ಸೃಷ್ಟಿಸುತ್ತಿದೆ.

ರಾಜ್ಯದಲ್ಲಿ ವರದಿಯಾದ ಮೊದಲ ಪ್ರಕರಣದ ಹಿನ್ನಲೆಯಲ್ಲಿ ರಂಗಾ ರೆಡ್ಡಿ ಜಿಲ್ಲೆಯ ತೋರ್ರುರ್ ಗ್ರಾಮದ ಕೋಳಿ ಸಾಕಣೆ ಕೇಂದ್ರದಿಂದ ಪರೀಕ್ಷೆಗೆ ಕಳುಹಿಸಿದ್ದ ೧೦ ಸ್ಯಾಂಪಲ್ ಗಳ ೫ ರಲ್ಲಿ ಕೋಳಿ ಜ್ವರದ ವೈರಸ್ ಇರುವುದು ಪತ್ತೆಯಾಗಿದೆ.

ಇದರಿಂದ ಎಚ್ಚರಗೊಂಡಿರುವ ತೆಲಂಗಾಣ ಪಶುಸಂಗೋಪನಾ ಇಲಾಖೆ ೬೨ ತಂಡಗಳನ್ನು ರಚಿಸಿ ಸುಮಾರು ೧.೪೫ ಲಕ್ಷ ಕೋಳಿಗಳ ನಿರ್ಮೂಲನೆಗೆ ಕಾರ್ಯ ಪ್ರಾರಂಭಿಸಿದೆ.

ಮಂಗಳವಾರವೇ ೩೫ ಸಾವಿರ ಕೋಳಿಗಳನ್ನು ಸುಟ್ಟುಹಾಕಲಾಗಿದ್ದು, ಈ ಕಾರ್ಯ ಗುರುವಾರದೊಳಗೆ ಮುಗಿಯುವ ಸಾಧ್ಯತೆ ಇದೆ.

ಗ್ರಾಮದ ೧೦ ಕಿಮೀ ತ್ರಿಜ್ಯದ ಸುತ್ತಮುತ್ತ ಇರುವ ಎಲ್ಲ ೧೮ ಗ್ರಾಮಗಳ ಕೋಳಿ ಸಾಕಣೆ ಕೇಂದ್ರಗಳನ್ನು ಪರಿವೀಕ್ಷಣೆ ಮಾಡಲಾಗುತ್ತಿದ್ದು ಮಾರಾಟಕ್ಕೆ ನಿರ್ಭಂದನೆ ಹೇರಲಾಗಿದೆ.

"ಒಂದು ಕೋಳಿ ಸಾಕಾಣೆ ಕೇಂದ್ರದಲ್ಲಿ ಮಾತ್ರ ಇದು ಪತ್ತೆಯಾಗಿದ್ದು, ಭೀತಿಯ ಅವಶ್ಯಕತೆ ಇಲ್ಲ. ಈ ಕೋಳಿಗಳು ಮಾರುಕಟ್ಟೆ ತಲುಪದಂತೆ ತಡೆಯಲಾಗುವುದು" ಎಂದು ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಿ ವೆಂಕಟೇಶ್ವರಲು ತಿಳಿಸಿದ್ದಾರೆ.

SCROLL FOR NEXT