ನವದೆಹಲಿ: ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಹಿಲರಿ ಕ್ಲಿಂಟನ್. ಅದಕ್ಕಾಗಿ ಭರ್ಜರಿ ಪ್ರಚಾರವನ್ನೂ ಕೈಗೊಂಡಿದ್ದಾರೆ. ಈ ಪ್ರಚಾರ ಹಿಂದೆ ಕೆಲಸ ಮಾಡುತ್ತಿರುವುದು ಭಾರತೀಯ ಅಮೆರಿಕನ್ ಮಹಿಳೆಯರು.
ಭಾರತೀಯ ಅಮೆರಿಕನ್ ಮಾಯಾ ಹ್ಯಾರಿಸ್ ಪ್ರಚಾರ ತಂಡದ ಮುಖ್ಯಸ್ಥರಾಗಿದ್ದಾರೆ. ಜತೆಗೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ನೀರಾ ಟಂಡನ್ ರಿಂದ ಅನೌಚಾರಿಕವಾಗಿ ಸಲಹೆ ಸೂಚನೆ ಪಡಕೊಳ್ಳಲಿದ್ದಾರೆ. ಮಾಯಾ ಹ್ಯಾರಿಸ್ ಸೆಂಟರ್ ಫಾರ್ ಅಮೆರಿಕನ್ ಕೇಂದ್ರದ ಮಾಜಿ ಸದಸ್ಯೆ. ಮಾನವ ಹಕ್ಕುಗಳ ಹೋರಾಟಗಾರ್ತಿಯೂ ಹೌದು. ಮುಂದಿನ ತಿಂಗಳು ಹ್ಯಾರಿಸ್ ನೇತೃತ್ವದ ತಂಡ ಪ್ರಚಾರ ತಂತ್ರವನ್ನು ಪ್ರಕಟಿಸಲಿದ್ದಾರೆ ಎನ್ನುವುದು ಹಿಲರಿ ಕ್ಲಿಂಟನ್ ಆಪ್ತ ವಲಯದ ಹೇಳಿಕೆ.
ಮಾಯಾರ ಜತೆಗೆ ಆ್ಯನ್ ಒ ಲಿಯರಿ, ಜ್ಯಾಕ್ ಸುಲ್ಲಿವಾನ್ ನೆರವಾಗಲಿದ್ದಾರೆ. ಈ ಇಬ್ಬರೂ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಪ್ತರಾಗಿದ್ದಾರೆ. ಅಂದ ಹಾಗೆ ಮಾಯಾ ಅವರ ಮೂಲ ಚೆನ್ನೈ. ಅವರ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್ 1960ರಲ್ಲಿ ಅಮೆರಿಕಕ್ಕೆ ತೆರಳಿದ್ದರು.