ನವದೆಹಲಿ: ಮೇಕ್ ಇನ್ ಇಂಡಿಯಾದ ಕನಸು ಬೆನ್ನಿಗೆ ಕಟ್ಟಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಏ.9ರಂದು ಆರಂಭಿಸಿದ್ದ ಮೂರು ರಾಷ್ಟ್ರಗಳ ಪ್ರವಾಸ ಶುಕ್ರವಾರ ಕೊನೆಗೊಂಡಿದೆ. ಕೆನಡಾ ಪ್ರಧಾನಿ ಹಾರ್ಪರ್ ಗೆ ವಿದಾಯ ಹೇಳಿದ ಪ್ರಧಾನಿ ಶನಿವಾರ ನವದೆಹಲಿಯಲ್ಲಿ ಬಂದಿಳಿಯಲಿದ್ದಾರೆ.
9 ದಿನಗಳ ಈ ಸುದೀರ್ಘ ಪ್ರವಾಸ ಅನೇಕ ಕಾರಣಗಳಿಂದಾಗಿ ವಿಶ್ವದ ಗಮನ ಸೆಳೆದಿದ್ದು, 36 ರಫಾಲ್ ಯುದ್ಧ ವಿಮಾನಗಳ ನೇರ ಖರೀದಿಯ ಅಚ್ಚರಿ, ಕೆನಡಾದ ಜತೆಗೆ ಐದು ವರ್ಷ ಯುರೇನಿಯಂ ಪೂರೈಕೆ ಒಪ್ಪಂದ ಹಾಗೂ ಜರ್ಮನಿಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಗೆ ಸಿಕ್ಕ ಬೆಂಬಲ ಪ್ರವಾಸದ ಉದ್ದೇಶವನ್ನು ಬಹುತೇಕ ಯಶಸ್ವಿಗೊಳಿಸಿದೆ. ಜತೆಗೆ, ಮೂರೂ ರಾಷ್ಟ್ರಗಳ ಜತೆಗಿನ ಭಾರತದ ಬಾಂಧವ್ಯದ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಈ ತ್ರಿರಾಷ್ಟ್ರ ಪ್ರವಾಸ ವೈಯಕ್ತಿಕವಾಗಿ ಮೋದಿ ಅವರಿಗೂ ವೈಯಕ್ತಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಫ್ರಾನ್ಸ್, ಜರ್ಮನಿ ಹಾಗೂ ಕೆನಡಾದಲ್ಲಿ ಭಾರತೀಯ ಮೂಲದವರಿಂದ ಸಿಕ್ಕ ಅಭೂತಪೂರ್ವ ಸ್ವಾಗತ ಹಾಗೂ ಬೆಂಬಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಜತೆಗೆ, ಸರ್ಕಾರ ಬದಲಾವಣೆ ಬಳಿಕ ವಿಶ್ವದ ಪ್ರಮುಖ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಆತ್ಮವಿಶ್ವಾಸದ ಹೊಸ ಮುಖವನ್ನೂ ಜಗತ್ತಿಗೆ ಅನಾವರಣ ಮಾಡಿಕೊಟ್ಟಿದೆ.
ಸದಸ್ಯತ್ವಕ್ಕೆ ಭಿಕ್ಷೆ ಬೇಡಲ್ಲ: ಪ್ರವಾಸ ಅನೇಕ ಮೊದಲು ಗಳಿಗೂ ಸಾಕ್ಷಿಯಾಗಿದೆ. ಪ್ರವಾಸದ ಭಾಗವಾಗಿ ಫ್ರಾನ್ಸ್ ನಲ್ಲಿರುವ ಮೊದಲ ಮಹಾಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಸ್ಮಾರಕಕ್ಕೂ ಮೋದಿ ಭೇಟಿ ನೀಡಿ ಗೌರವ ಸಲ್ಲಿಸಿದ್ದರು. ಈ ಮೂಲಕ ಈ ರೀತಿ ಗೌರವ ಸಲ್ಲಿಸಿದ ಮೊದಲ ಭಾರತೀಯ ಪ್ರಧಾನಿ ಎನ್ನುವ ಗೌರವಕ್ಕೂ ಮೋದಿ ಪಾತ್ರರಾದರು.
ಈ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಾಯಂ ಸದಸ್ಯತ್ವಕ್ಕಾಗಿ ಭಾರತ ಮುಂದುವರಿದ ರಾಷ್ಟ್ರಗಳ ಬೆಂಬಲ ಯಾಚಿಸುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಈ ವಿಚಾರದಲ್ಲಿ ಭಾರತದ ನಿಲುವು ಬದಲಾಗಿದ್ದು ಇಡೀ ವಿಶ್ವದ ಗಮನಕ್ಕೆ ಬಂತು. ಈ ಸ್ಥಾನಕ್ಕಾಗಿ ನಾನಿನ್ನು ಎಲ್ಲ ರಾಷ್ಟ್ರಗಳ ಮುಂದೆ ಭಿಕ್ಷೆ ಬೇಡಲ್ಲ. ಅದು ನನ್ನ ಹಕ್ಕು. ಆ ಸ್ಥಾನ ಪಡೆಯುವ ಅರ್ಹತೆ ನನಗಿದೆ ಎನ್ನುವರ್ಥದಲ್ಲಿ ಮೋದಿ ಹೇಳಿಕೆ ನೀಡಿದ್ದು ಭಾರತ ಬದಲಾಗುತ್ತಿದೆ.
ಬಲಿಷ್ಠವಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯೊದಗಿಸಿತು. ಭಾರತದ್ದೇ ನಾಯಕತ್ವ: ಸೆಪ್ಟೆಂಬರ್‍ನಲ್ಲಿ ನಡೆಯಲಿರುವ ಜಾಗತಿಕ ತಾಪಮಾನ ಏರಿಕೆಗೆ ಸಂಬಂಧಿಸಿದ ಸಮಾವೇಶದಲ್ಲಿ ಭಾರತ ಗಟ್ಟಿದನಿಯಲ್ಲಿ ಮಾತನಾಡಲಿದೆ ಎನ್ನುವ ಸುಳಿವನ್ನೂ ಪ್ರವಾಸ ನೀಡಿದೆ. ಸಮ್ಮೇಳನಕ್ಕೆ ಭಾರತವೇ ಕಾರ್ಯಸೂಚಿ ನಿಗದಿ ಮಾಡಲಿದೆ ಎಂದು ಮೋದಿ ಫ್ರಾನ್ಸ್, ಜರ್ಮನಿಯಲ್ಲಿ ಘೋಷಿಸಿದ್ದಾರೆ.
ವೈಯಕ್ತಿಕ ಸಂಬಂಧ ಗಟ್ಟಿ
ಫ್ರಾನ್ಸ್, ಜರ್ಮನಿ ಹಾಗೂ ಕೆನಡಾದ ನಾಯಕರ ಜತೆಗೆ ವೈಯಕ್ತಿಕ ಬಾಂಧವ್ಯ ಬೆಳೆಸಿಕೊಳ್ಳಲೂ ಮೋದಿ ಅವರಿಗೆ ಈ ಭೇಟಿ ಅವಕಾಶ ಮಾಡಿಕೊಟ್ಟಿತು. ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲೆಂಡ್ ಅವರ ಜತೆಗೆ `ನಾವ್ ಪೆ ಚರ್ಚಾ', ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್ ಜತೆಗಿನ ಚಾಯ್ ಪೆ ಚರ್ಚಾ ಹಾಗೂ ಕೆನಡಾ ಪ್ರಧಾನಿ ಹಾರ್ಪರ್ ಅವರ ಜತೆಗೆ ಏರ್ ಇಂಡಿಯಾ ಒನ್‍ನಲ್ಲಿನ ಪಯಣ, ರಿಕೋ ಕೊಲಿಶಿಯಂನಲ್ಲಿ ಜಂಟಿ ಭಾಷಣ ಪರಸ್ಪರರ ಜತೆಗೆ ವಿಶೇಷ ಸಖ್ಯ ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಈ ಬಾಂಧವ್ಯ ಅಂತರಾಷ್ಟ್ರೀಯಮಟ್ಟದಲ್ಲಿ ಭಾರತದ ನೆರವಿಗೆ ಬರಲಿದೆ.
ಅಣು ಇಂಧನ ಪೂರೈಕೆ ವಿಚಾರದಲ್ಲೂ ಈವರೆಗೆ ಅಂತಾ ರಾಷ್ಟ್ರೀಯ ಸಮುದಾಯ ಭಾರತದ ಕುರಿತು ಈವರೆಗೆ ತೋರುತ್ತಿದ್ದ ನಿಲುವು ಬದಲಾವಣೆಯಾಗಿದೆ.
ಸ್ಮಾರ್ಟ್ ಸಿಟಿಯಲ್ಲಿ ಹೂಡಿಕೆಗೆ ಕೆನಡಾ ಉದ್ಯಮಿಗಳಿಗೆ ಆಹ್ವಾನ
ಟೊರೊಂಟೋ/ವ್ಯಾಂಕೋವರ್: ಸ್ಮಾರ್ಟ್ ಸಿಟಿ, ರೈಲ್ವೆ ಹಾಗೂ ಗೃಹ ನಿರ್ಮಾಣ ಕ್ಷೇತ್ರಗಳಲ್ಲಿ ಹೂಡಿಕೆಗೆ ಕೆನಡಾದ ಕಂಪನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ. ಭಾರತದಲ್ಲಿ ಅಧಿಕಾರ ಬದಲಾವಣೆಯಾದ ಬಳಿಕ ರೈಲ್ವೆ, ವಿಮೆ ಮತ್ತು ಗೃಹ ನಿರ್ಮಾಣ ಕ್ಷೇತ್ರಗಳಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಕೆನಡಾ ಉದ್ಯಮಿಗಳು ಇದರ ಲಾಭ ಪಡೆದುಕೊಳ್ಳಬೇಕು. ಕೆನಡಾದ ಉದ್ಯಮಿಗಳಿಗೆ ಸಾಮರ್ಥ್ಯ ಇದೆ. ಆದರೆ, ಈ ಸಾಮರ್ಥ್ಯಕ್ಕೆ ಕೆನಡಾ ಸಣ್ಣ ದೇಶ. ಹಾಗಾಗಿ ನೀವು ಹೊಸ ಹೂಡಿಕೆ ಅವಕಾಶದ ಕುರಿತು ಗಮನಕೊಡಬೇಕಿದೆ. ಭಾರತದಲ್ಲಿ ಜನ ಸಂಖ್ಯೆ, ಪ್ರಜಾಪ್ರಭುತ್ವ ಹಾಗೂ ಬೇಡಿಕೆ ಮೂರೂ ಇದೆ. ಹಾಗಾಗಿ ಹೂಡಿಕೆಗೆ ಭಾರತ ಪ್ರಶಸ್ತ ದೇಶ ಎಂದಿರುವ ಮೋದಿ, ವೇಸ್ಟ್ ಮ್ಯಾನೇಜ್‍ಮೆಂಟ್‍ಗೆ ಸಂಬಂಧಿಸಿದ ತಜ್ಞ ಕಂಪನಿಗಳಿಗೆ ಭಾರತದ ಬಾಗಿಲು ಸದಾ ಮುಕ್ತವಾಗಿದೆ ಎಂದೂ ಭರವಸೆ ನೀಡಿದ್ದಾರೆ. ಇದೇ ವೇಳೆ, ಭಾರತದಲ್ಲಿ ಸ್ಥಾಪಿಸಲುದ್ದೇಶಿಸಿರುವ 100 ಸ್ಮಾರ್ಟ್ ಸಿಟಿಗಳ ಕುರಿತೂ ಮೋದಿ ಸಿಇಒಗಳಿಗೆ ಮಾಹಿತಿ ನೀಡಿದ್ದಾರೆ. ಅಮೆರಿಕವು ಮೂರು ನಗರಗಳ ಅಭಿವೃದ್ಧಿಗೆ ಆಸಕ್ತಿ ತೋರಿದೆ.
ಜಪಾನ್ ಹಾಗೂ ಆಸ್ಟ್ರೇಲಿಯಾ ಕೂಡ ಯೋಜನೆಗೆ ಸಹಯೋಗ ನೀಡುತ್ತಿದೆ. ನೀವೂ ಈ ಯೋಜನೆಯಲ್ಲಿ ಪಾಲುದಾರರಾಗಬಹುದು ಎಂದಿದ್ದಾರೆ ಮೋದಿ.
ಗುರುದ್ವಾರ, ದೇಗುಲಕ್ಕೆ ಭೇಟಿ
ಮೋದಿ ಅವರು ಕೆನಡಾ ಪ್ರಧಾನಿ ಸ್ಟೀಫನ್ ಹಾರ್ಪರ್ ಅವರ ಜತೆ ಶುಕ್ರವಾರ ವ್ಯಾಂಕೋವರ್‍ನ ಗುರುದ್ವಾರ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡಿದ್ದು ವಿಶೇಷ. ಟೊರೊಂಟೋದಿಂದ ನೇರವಾಗಿ ಗುರುದ್ವಾರಕ್ಕೆ ತೆರಳಿದ ಉಭಯ ನಾಯಕರು ಕೆಲ ಕಾಲ ಪ್ರಾರ್ಥನೆ ಸಲ್ಲಿಸಿದರು. ನಂತರ ಭಕ್ತಿಯ ಸಂಕೇತವಾಗಿ `ಸರೋಪಾ'(ಪವಿತ್ರ ಬಟ್ಟೆ) ಸಲ್ಲಿಸಿದರು. ಬಳಿಕ ಮೋದಿ ಹಾಗೂ ಹಾರ್ಪರ್ ಅವರು ಲಕ್ಷ್ಮೀ ನಾರಾಯಣ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಹಿಂದೂ ಧರ್ಮದ ಕುರಿತು ಉತ್ತಮ ವ್ಯಾಖ್ಯಾನ ನೀಡಿದೆ. ಹಿಂದೂ ಅನ್ನುವುದು ಒಂದು ಧರ್ಮ ಅಲ್ಲ. ಅದೊಂದು ಜೀವನ ಕ್ರಮ ಎಂದಿದೆ. ಹಿಂದೂಧರ್ಮವು ವೈಜ್ಞಾನಿಕ ಜೀವನ ಕ್ರಮದ ಮೂಲಕ ನಿಸರ್ಗದ ಅನುಕೂಲಕ್ಕಾಗಿ ಕೆಲಸ ಮಾಡಿದೆ ಎಂದು ಮೋದಿ ಹೇಳಿದ್ದಾರೆ.