ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸೋಮವಾರ ಸಂಸತ್ತಿನಲ್ಲಿ ಕ್ಷಮೆಯಾಚಿಸಿದ್ದಾರೆ
ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆ ವಿರುದ್ಧ ಕಾಂಗ್ರೆಸ್ ಇಂದು ಲೋಕಸಭೆಯಲ್ಲಿ ತೀವ್ರವಾಗಿ ಪ್ರತಿಭಟಿಸಿತು. ಅಲ್ಲದೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆಯಾಚಿಸಬೇಕು ಮತ್ತು ಗಿರಿರಾಜ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿತು.
ಗಿರಿರಾಜ್ ಸಿಂಗ್ ಅವರು ದೇಶದ ಮಹಿಳೆಯರಿಗಷ್ಟೇ ಅಲ್ಲ, ದೇಶದ ಪ್ರತಿ ಪ್ರಜೆಗಳಿಗೆ ಹಾಗೂ ನೈಜೀರಿಯಾ ಜನತೆಗೂ ಅವಮಾನ ಮಾಡಿದ್ದಾರೆ. ಹೀಗಾಗಿ ಅವರು ಕೂಡಲೇ ರಾಜಿನಾಮೆ ನೀಡಬೇಕು ಮತ್ತು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧೆ ಒತ್ತಾಯಿಸಿದರು.
ಪ್ರತಿಪಕ್ಷಗಳ ತೀವ್ರ ಗದ್ದಲದ ಹಿನ್ನೆಲೆಯಲ್ಲಿ ಗಿರಿರಾಜ್ ಸಿಂಗ್ ಅವರು, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಾರೆ, ದಯವಿಟ್ಟು ಕ್ಷಮಿಸಿ ಎಂದು ಹೇಳಿದರು. ಈ ವೇಳೆ ಸೋನಿಯಾ ಗಾಂಧಿ ಸಹ ಉಪಸ್ಥಿತರಿದ್ದರು.
ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ್ದ ಗಿರಿರಾಜ್ ಸಿಂಗ್, ರಾಜೀವ್ ಗಾಂಧಿ ಅವರು ನೈಜೀರಿಯಾಗೆ ಸೇರಿದ ಹೆಣ್ಣು ಮಗಳನ್ನು ಮದುವೆಯಾಗಿದ್ದರೆ, ಆ ಹೆಣ್ಣು ಮಗಳು ಬೆಳ್ಳಗಿರದಿದ್ದರೆ ಆಕೆಗೆ ಕಾಂಗ್ರೆಸ್ ಪಕ್ಷ ಅಧ್ಯಕ್ಷೆ ಸ್ಥಾನ ನೀಡುತ್ತಿತ್ತೇ? ಎಂದು ಹೇಳುವ ಮೂಲಕ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದರು.
ಗಿರಿರಾಜ್ ಅವರ ಈ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ವಿರೋಧಕ್ಕೆ ವ್ಯಕ್ತವಾಗಿತ್ತಲ್ಲದೆ, ರಸ್ತೆಗಳಲ್ಲಿ ಪ್ರತಿಭಟನೆಗಿಳಿದು ಗಿರಿರಾಜ್ ಕ್ಷಮಾಪಣೆ ಕೋರುವಂತೆ ಆಗ್ರಹಿಸಿತ್ತು.